ADVERTISEMENT

ಕೊಪ್ಪಳ: 17 ಹೊಸ ಪಿಯು ಕಾಲೇಜುಗಳಿಗೆ ಪ್ರಸ್ತಾವ

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಅಲೆದಾಟ ತಪ್ಪಿಸಲು ಬೇಕಿದೆ ತ್ವರಿತ ಕ್ರಮ

ಪ್ರಮೋದ
Published 31 ಜುಲೈ 2024, 6:48 IST
Last Updated 31 ಜುಲೈ 2024, 6:48 IST
   

ಕೊಪ್ಪಳ: ಜಿಲ್ಲಾಕೇಂದ್ರ ಹಾಗೂ ವಿವಿಧ ತಾಲ್ಲೂಕುಗಳ ಕೇಂದ್ರಕ್ಕೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣಕ್ಕಾಗಿ ಬರುತ್ತಿದ್ದು, ಅವರ ಅಲೆದಾಟ ತಪ್ಪಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದ್ದರಿಂದ ಜಿಲ್ಲೆಗೆ 17 ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವ ಕಳುಹಿಸಲಾಗಿದ್ದು, ಅಧಿಕಾರಿಗಳು ಸರ್ಕಾರದ ಉತ್ತರದ ನಿರೀಕ್ಷೆಯಲ್ಲಿದ್ದಾರೆ.

ಕೊಪ್ಪಳ ತಾಲ್ಲೂಕಿನ ಗಿಣಿಗೇರಾ, ಕವಲೂರು, ಕೂಕನಪಳ್ಳಿ, ಬೆಟಗೇರಿ, ಲೇಬಗೇರಿ, ಗಂಗಾವತಿ ತಾಲ್ಲೂಕಿನ ಆನೆಗೊಂದಿ, ವೆಂಕಟಗಿರಿ, ಯಲಬುರ್ಗಾ ತಾಲ್ಲೂಕಿನ ತಾಳಕೇರಿ, ಮುಧೋಳ, ಕುಷ್ಟಗಿ ತಾಲ್ಲೂಕಿನ ನಿಲೋಗಲ್‌, ಮೆಣದಾಳ, ಸಂಗನಾಳ, ಲಿಂಗದಳ್ಳಿ ಗ್ರಾಮಗಳಲ್ಲಿ ಕಾಲೇಜುಗಳ ಸ್ಥಾಪನೆ ಅಗತ್ಯವಿದೆ ಎಂದು ಇಲಾಖೆ ಹೇಳಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತವರು ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುದಗುಂಪಾ, ಹುಲಿಹೈದರ್‌, ಮುಸಲಾಪುರ, ಚಿಕ್ಕಡಂಕನಕಲ್‌ ಮತ್ತು ಯರಡೋಣಾ ಗ್ರಾಮಗಳಲ್ಲಿ ಕಾಲೇಜುಗಳನ್ನು ಆರಂಭಿಸಲು ಬೇಡಿಕೆಯಿದೆ ಎಂದು ಇಲಾಖೆಗೆ ಪ್ರಸ್ತಾವ ಹೋಗಿದೆ.

ADVERTISEMENT

ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಕಳುಹಿಸಲಾಗಿರುವ ಪ್ರಸ್ತಾವದ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿರುವ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಈ ಪಟ್ಟಿ ತಯಾರಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಮುಗಿಸಿದವರು ಮುಂದೆ ಸ್ಥಳೀಯವಾಗಿಯೇ ಪಿ.ಯು. ಹಂತ ಕಲಿಯಲು ಅನುಕೂಲವಾಗುತ್ತದೆ ಎಂದು ಇಲಾಖೆ ಲೆಕ್ಕಾಚಾರ ಹಾಕಿದೆ.

ಕಳೆದ ವರ್ಷ ಕೂಡ ಇಲಾಖೆಯಿಂದ ಪ್ರಸ್ತಾವ ಹೋಗಿತ್ತು. ಈ ಬಾರಿಯೂ ಹೊಸ ಕಾಲೇಜುಗಳ ಬೇಡಿಕೆ ಪಟ್ಟಿ ಕಳುಹಿಸಲಾಗಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲೆಯ ವಿವಿಧೆಡೆಯಿಂದ ಅನೇಕ ಜನ ವಿದ್ಯಾರ್ಥಿಗಳು ಈಗಲೂ ತಮ್ಮ ಸಮೀಪದ ಕಾಲೇಜುಗೆ ಎಡತಾಕಬೇಕಾಗುತ್ತಿದೆ. ಸ್ಥಳೀಯವಾಗಿಯೇ ಕಾಲೇಜು ಮಂಜೂರು ಆದರೆ ಇದ್ದೂರಿನಲ್ಲಿಯೇ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ದೂರದ ಊರುಗಳಿಗೆ ಅಲೆದಾಟ, ಬಸ್‌ನಲ್ಲಿ ಪರದಾಟ ತಪ್ಪುವುದಿಲ್ಲ ಎನ್ನುವುದು ವಿದ್ಯಾರ್ಥಿಗಳ ಬೇಸರ.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪದವಿಪೂರ್ವ ಮತ್ತು ಪದವಿ ಕಲಿಯಲು ಜಿಲ್ಲಾಕೇಂದ್ರಕ್ಕೆ ಬರುತ್ತಿದ್ದಾರೆ. ಪದವಿಗಾಗಿಯೂ ಬರುವ ಸಂಖ್ಯೆಯೂ ಸಾಕಷ್ಟಿದೆ. ಹೀಗಾಗಿ ಬಸ್‌ಗಳ ಕೊರತೆ, ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್‌ಗಳ ಬಾರದಿದ್ದರೂ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸರ್ಕಾರ ಹೊಸ ಪಿಯು ಕಾಲೇಜುಗಳ ಆರಂಭಕ್ಕೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಪೋಷಕರು.

ಅಗತ್ಯವಿರುವ ಕಡೆ ಕಾಲೇಜು ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರದ ಆದೇಶದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು
- ಜಗದೀಶ್‌ ಎಚ್‌.ಎಸ್‌, ಡಿಡಿಪಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.