ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಕೈಜೋಡಿಸಿ: ವಿಕಾಸ್ ಕಿಶೋರ್ ಸುರಳ್ಕರ್

ಮಕ್ಕಳ ಸಹಾಯವಾಣಿ- 1098 ಕುರಿತು ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:03 IST
Last Updated 18 ಮೇ 2022, 4:03 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಕ್ಕಳ ಸಹಾಯವಾಣಿ-– 1098 ಅಂಗವಾಗಿ ಮಕ್ಕಳ ರಕ್ಷಣಾ ಯೋಜನೆ ಹೊರತಂದಿರುವ ಪೋಸ್ಟರ್‌ ಅನ್ನು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಬಿಡುಗಡೆ ಮಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಕ್ಕಳ ಸಹಾಯವಾಣಿ-– 1098 ಅಂಗವಾಗಿ ಮಕ್ಕಳ ರಕ್ಷಣಾ ಯೋಜನೆ ಹೊರತಂದಿರುವ ಪೋಸ್ಟರ್‌ ಅನ್ನು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಬಿಡುಗಡೆ ಮಾಡಿದರು   

ಕೊಪ್ಪಳ: ಸಮುದಾಯದಲ್ಲಿ, ಮಕ್ಕಳಿಗೆ, ಮಕ್ಕಳ ಸಹಾಯವಾಣಿ-1098 ರ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ-1098 ಅಂಗವಾಗಿ ಮಕ್ಕಳ ರಕ್ಷಣಾ ಯೋಜನೆ ಹೊರತಂದಿರುವ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳ ಸಹಾಯವಾಣಿ ಬಗ್ಗೆ ಮುಖ್ಯವಾಗಿ ಮಕ್ಕಳಲ್ಲಿ ತಿಳಿವಳಿಕೆ ಬರಬೇಕು. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ-1098 ಕುರಿತು ಗೋಡೆ ಬರಹಗಳನ್ನು ಬರೆಯಿಸಿ. ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಸಂಕಷ್ಟದಲ್ಲಿರುವ ಮಕ್ಕಳು ಅಂದರೆ ಭಿಕ್ಷಾಟನೆಯಲ್ಲಿ ತೊಡಗಿರುವ, ಪರಿತ್ಯಕ್ತ, ಕಾಣೆಯಾದ, ಬಾಲ್ಯವಿವಾಹವಾದ, ಬಾಲ್ಯವಿವಾಹ ಕ್ಕೊಳಗಾಗಬಹುದಾದ ಸಾಧ್ಯತೆಯಿರುವ, ಲೈಂಗಿಕ ದೌರ್ಜನ್ಯ, ಹಿಂಸೆ, ಶೋಷಣೆ, ಮಾದಕ ವ್ಯಸನ, ಶಿಕ್ಷಣದಿಂದ ವಂಚಿತರಾದ, ಕುಟುಂಬದಿಂದ ದೂರವಾಗಿರುವ, ದುರುಪಯೋಗ, ನಿರ್ಲಕ್ಷ್ಯಕ್ಕೊಳಗಾದ ಅಥವಾ ಒಳಗಾಗಬಹುದಾದ ಸಾಧ್ಯತೆಯಿರುವ ಮಕ್ಕಳು ಕಂಡುಬಂದಲ್ಲಿ, ಮಕ್ಕಳ ಸಹಾಯವಾಣಿ-1098ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ, ಸಹಾಯವಾಣಿ ಸಂಖ್ಯೆಯು ದಿನದ 24ಗಂಟೆ ಮತ್ತು ವಾರದ 7 ದಿನವೂ ಕಾರ್ಯನಿರ್ವಹಿಸುತ್ತದೆ. ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಮಾಹಿತಿಯು ತಲುಪಿದ ಒಂದು ಘಂಟೆಯೊಳಗಾಗಿ ಸಂಬಂಧಿಸಿದ ಸ್ಥಳಕ್ಕೆ ಸಹಾಯವಾಣಿ ಕಾರ್ಯಕರ್ತರು, ಅಧಿಕಾರಿಗಳು ಧಾವಿಸಿ, ಸಂಕಷ್ಠದಲ್ಲಿರುವ ಮಗುವನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುತ್ತಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಆ ಮಗುವಿಗೆ ಅವಶ್ಯವಾದ ಪುನರ್ವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿ.ಪಂ.ಸಿಇಒ ಬಿ.ಫೌಜಿಯಾ ತರನ್ನುಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.