ಕುಷ್ಟಗಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು
ಕುಷ್ಟಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಬುಧವಾರ ಮುಷ್ಕರ ನಡೆಸಿದವು.
ಕಾರ್ಗಿಲ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಡಾ.ಅಂಬೇಡ್ಕರ್ ವೃತ್ತದ ಬಳಿ ಮಹಿಳೆಯರೂ ಸೇರಿ ನೂರಾರು ಜನರು ರಸ್ತೆಯಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಕೆ.ದೇಸಾಯಿ, ಕಲಾವತಿ ಮೆಣೆದಾಳ, ರಂಗಪ್ಪ ಹಾಗೂ ಇತರರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ನಿಲುವುಗಳನ್ನು ಖಂಡಿಸಿದರು.
ನಂತರ ಪೊಲೀಸ್ ಠಾಣೆಗೆ ಬಂದ ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಆರ್.ಕೆ.ದೇಸಾಯಿ ಪ್ರತಿಭಟನೆ ಸಹಕರಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ದೇಸಾಯಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕಲಾವತಿ ಕುಲಕರ್ಣಿ,‘ ಬಂಧನಕ್ಕೆ ಒಳಗಾಗದೆ ಜಾಗ ಬಿಟ್ಟು ಕದಲುವುದಿಲ್ಲ. ದೇಶದ ಬೇರೆ ಬೇರೆ ಕಡೆ ಪ್ರತಿಭಟನಾನಿರತ ನಮ್ಮ ಮುಖಂಡರೂ ಮೈ ಮುರಿಯುವಂತೆ ಪೊಲೀಸರ ಥಳಿತಕ್ಕೆ ಒಳಗಾಗಿದ್ದರೆ ನಾವು ಇಲ್ಲಿ ಮುಗಳ್ನಗೆ ಬೀರಿ, ಮದುವೆ ಮೆರವಣಿಗೆ ಮಾಡಿ ನಿಮಗೆ ಟಾಟಾ ಹೇಳಿ ಹೋಗಲು ಬಂದಿಲ್ಲ. ನಮ್ಮನ್ನು ಬಂಧಿಸಿ’ ಎಂದು ಪಟ್ಟು ಹಿಡಿದರು.
ಠಾಣೆಗೆ ಮುತ್ತಿಗೆ ಹಾಕಿದರೂ ತಮ್ಮನ್ನು ಬಂಧಿಸದ ಪೊಲೀಸರ ಕ್ರಮಕ್ಕೆ ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಕೆಲ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿದ ಕಲಾವತಿ,‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಮೃಗೀಯ ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಬಂಧಿಸಿದ್ದೀರಿ. ಈಗೇಕೆ ಅಂಥ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಮುಜುಗರಕ್ಕೆ ಒಳಗಾದ ಪೊಲೀಸರು ಅನಿವಾರ್ಯವಾಗಿ ಕೆಲ ಪ್ರಮುಖರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕಾಯಿತು.
ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ ಇದ್ದರು.
ಬ್ಯಾಂಕ್, ಇತರೆ ಹಣಕಾಸು ಸಂಸ್ಥೆಗಳ ಸಿಬ್ಬಂದಿ, ಅಂಗನವಾಡಿ, ಗ್ರಾಮ ಪಂಚಾಯಿತಿ, ಅಕ್ಷರ ದಾಸೋಹ ಯೋಜನೆಯ ನೌಕರರು ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.