ADVERTISEMENT

ಗಂಗಾವತಿ: ಇಂದ್ರ ಪವರ್ ಎನರ್ಜಿಸ್ ಕಂಪನಿಯಿಂದ ಕಾರ್ಮಿಕರ ವಜಾ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 11:50 IST
Last Updated 7 ಜನವರಿ 2022, 11:50 IST
ಇಂದ್ರ ಪವರ್ ಎನರ್ಜಿಸ್ ಕಂಪನಿಯು ಕೆಲಸದಿಂದ ವಜಾಗೊಳಿಸಿದ್ದನ್ನು ವಿರೋಧಿಸಿ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿದರು
ಇಂದ್ರ ಪವರ್ ಎನರ್ಜಿಸ್ ಕಂಪನಿಯು ಕೆಲಸದಿಂದ ವಜಾಗೊಳಿಸಿದ್ದನ್ನು ವಿರೋಧಿಸಿ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿದರು   

ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಸಮೀಪದ ಇಂದ್ರ ಪವರ್ ಎನರ್ಜಿಸ್ ಕಂಪನಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ವಿರೋಧಿಸಿ 56 ಜನ ಕಾರ್ಮಿಕರು ಕಂಪನಿ ನಿಲುವು ಖಂಡಿಸಿ, ಕಂಪನಿ ಎದುರು ಪ್ರತಿಭಟನೆ ನಡೆಸಿದರು.

ಕಂಪನಿಯ ಕಾರ್ಮಿಕ ಶ್ರೀನಿವಾಸ ಮಾತನಾಡಿ, ’ಇಂದ್ರ ಪವರ್ ಎನರ್ಜಿ (ಭತ್ತದ ತೌಡಿನಿಂದ ವಿದ್ಯುತ್ ತಯಾರಿಸುವ) ಕಂಪನಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಇದೀಗ ಕಂಪನಿ ಯಾವುದೇ ಸೂಚನೆ ನೀಡದೆ, ನೋಟಿಸ್ ನೀಡದೆ, ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ. ಈ ತರಹ ಕಂಪನಿಯು ತನ್ನ ಮನಸ್ಸಿಗೆ ತೋಚಿದಂತೆ ಕೆಲಸದಿಂದ ತೆಗೆದರೆ ನಾವು, ನಮ್ಮ ಕುಟುಂಬದ ಪರಿಸ್ಥಿತಿ ಏನಾಗಬೇಕು. ಇದೀಗ ವಜಾಗೊಳಿಸಲಾದ ಎಲ್ಲ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಪುನಃ ಕೆಲಸಕ್ಕೆ ಕರೆದುಕೊಳ್ಳುವಂತೆ ಮಾಲಿಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಕಾರ್ಮಿಕ ಸುಧಾಕರರೆಡ್ಡಿ ಮಾತನಾಡಿ, ’ಯಾವುದೇ ಕಂಪನಿಯಲ್ಲಾಗಲಿ ಕೆಲಸದಿಂದ ತೆಗೆಯುವ ಮೂರು ತಿಂಗಳ ಮುಂಚೆಯೇ ನೋಟಿಸ್ ನೀಡಲಾಗುತ್ತದೆ. ಆದರೆ ಇಂದ್ರ ಪವರ್ ಕಂಪನಿಯಲ್ಲಿ ಯಾವ ನೋಟಿಸ್ ನೀಡದೆ, ತೆಗೆಯಲು ಕಾರಣ ತಿಳಿಸದೆ, ಕೆಲಸದಿಂದ ವಜಾ ಮಾಡಲಾಗಿದೆ’ ಎಂದರು.

ADVERTISEMENT

’ಕಂಪನಿಯಲ್ಲಿ ಕೆಲಸ ಮಾಡುವ 56 ಕಾರ್ಮಿಕರಲ್ಲಿ 22 ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ಪಾವತಿಯಾಗುತ್ತಿತ್ತು. ಕಂಪನಿಯ ಮಾಲಿಕರು ಭವಿಷ್ಯ ನಿಧಿ ಹಣ ಪಾವತಿ ವಿಚಾರದಲ್ಲಿ ಗೊಂದಲ‌ ಸೃಷ್ಟಿಸಿ, ಹಣ ಬಿಡುಗಡೆ ಮಾಡದಂತೆ ತಡೆದು, ಕಾರ್ಮಿಕರಿಗೆ ಮೋಸ ಮಾಡಲಾಗುತ್ತಿದೆ‘ ಎಂದರು.

ಎಲ್ಲ ಕಾರ್ಮಿಕರನ್ನುಕೂಡಲೆ ಮರಳಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಜೊತೆಗೆ ಎಲ್ಲ 56 ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ಪಾವತಿಸಬೇಕು. ಕೆಲಸದಿಂದ ವಜಾ‌ ಮಾಡಿದ ಕಾರಣಕ್ಕೆ ಮೂರು ತಿಂಗಳ ವೇತನ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಕಾರ್ಮಿಕರ ಸಂಘಟನೆಗಳನ್ನು ಒಟ್ಟುಗೂಡಿಸಿ ಕಂಪನಿ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕಾರ್ಮಿಕರು ಎಚ್ಚರಿಸಿದರು.

ಎಂ.ಬಸವರಾಜ, ಜಿ.ಮಂಜುನಾಥ, ರಂಗನಾಥ, ನರೇಶ, ನೀಲಕಂಠ, ಜಗದೀಶ, ಮಾಂತೇಶ, ಶಿವು, ಲಕ್ಷ್ಮಣ, ಲಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.