ADVERTISEMENT

ಮಳೆ | ದಕ್ಷಿಣದಲ್ಲಿ ಭರಪೂರ, ‘ಕಲ್ಯಾಣ’ದಲ್ಲಿ ಕೊರತೆ

ಪ್ರಮೋದ ಕುಲಕರ್ಣಿ
Published 6 ಜುಲೈ 2025, 6:37 IST
Last Updated 6 ಜುಲೈ 2025, 6:37 IST
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನಲ್ಲಿ ಬಾಡಿ ಹೋಗಿರುವ ಬೆಳೆ
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನಲ್ಲಿ ಬಾಡಿ ಹೋಗಿರುವ ಬೆಳೆ   

ಕೊಪ್ಪಳ: ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಭರಪೂರವಾಗಿ ಮಳೆಯಾಗುತ್ತಿದ್ದರೆ,  ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಮಳೆ, ತೇವಾಂಶದ ಕೊರತೆಯಿಂದಾಗಿ ಈ ಭಾಗದ ರೈತರು ಮೊಳಕೆಯೊಡೆದ ಸಸಿಗಳನ್ನು ನಿರಾಸೆಯಿಂದ ಕಿತ್ತು ಹಾಕುತ್ತಿದ್ದಾರೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಜೂನ್‌ನಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳ ಪೈಕಿ ಆರರಲ್ಲಿ ಮಳೆ ಕೊರತೆಯಾಗಿದೆ.  ಮುಂಗಾರು ಪೂರ್ವದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರಿಂದ ರೈತರಲ್ಲಿ ಸಂತೋಷ ಮನೆ ಮಾಡಿತ್ತು. ಆದರೆ, ಮುಂಗಾರು ಪೂರ್ವದ ಉತ್ತಮ ಮಳೆಯು, ಬಿತ್ತನೆಯ ಸಮಯವಾದ ಜೂನ್‌ನಲ್ಲಿ ಲಭಿಸಲಿಲ್ಲ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯಲ್ಲಿ 4.9 ಸೆಂ.ಮೀ., ಕೊಪ್ಪಳ 4.2 ಸೆಂ.ಮೀ., ರಾಯಚೂರು 1.9 ಸೆಂ.ಮೀ., ಕಲಬುರಗಿ 3.5 ಸೆಂ.ಮೀ., ಯಾದಗಿರಿ 3.8 ಸೆಂ.ಮೀ. ಮತ್ತು ಬೀದರ್‌ ಜಿಲ್ಲೆಯಲ್ಲಿ 4.9 ಸೆಂ.ಮೀ.ನಷ್ಟು ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ 2.2 ಸೆಂ.ಮೀ. ಹೆಚ್ಚು ಮಳೆಯಾಗಿದೆ.

ADVERTISEMENT

ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅನ್ನದಾತರು ಮಳೆ ನೆಚ್ಚಿಕೊಂಡು ಮೆಕ್ಕಜೋಳ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರು. ಆದರೆ, ಈಗ ತೇವಾಂಶದ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಕುಕನೂರು, ಯಲಬುರ್ಗಾ, ಕುಷ್ಟಗಿ ಸೇರಿದಂತೆ ಹಲವು ಕಡೆ ರೈತರು ಉಳುಮೆ ಮಾಡಿದ್ದ ಮೆಕ್ಕೆಜೋಳವನ್ನು ಬೇಸರದಿಂದಲೇ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ.  

‘ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರಿಂದ ಆರಂಭದಲ್ಲಿ ಭಾರಿ ಖುಷಿಯಾಗಿತ್ತು. ಕಡಿಮೆ ಖರ್ಚು ಮತ್ತು ಉತ್ತಮ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಮೆಕ್ಕೆಜೋಳ ಉಳುಮೆ ಮಾಡಿದ್ದೆ. ಮಳೆ ಅಗತ್ಯವಾಗಿದ್ದ ಜೂನ್‌ನಲ್ಲಿ ವಾಡಿಕೆಯಷ್ಟೂ ಬರಲಿಲ್ಲ. ದಕ್ಷಿಣದ ಜಿಲ್ಲೆಗಳಲ್ಲಿ ಬರುತ್ತಿರುವ ಮಳೆ ನಮ್ಮಲ್ಲಿಯೂ ಬಂದಿದ್ದರೆ ಕೃಷಿ ಚಟುವಟಿಕೆಗೆ ಹುಮ್ಮಸ್ಸು ಇರುತ್ತಿತ್ತು’ ಎಂದು ರೈತ ಬಸವರಾಜ ಚಟ್ಟಿ ಹೇಳಿದರು.

ಜೂನ್‌ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಇದರಿಂದ ಕೆಲವು ಕಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಕೆಲವರು ಬೆಳೆ ಕಿತ್ತು ಹಾಕಿದ್ದಾರೆ. ಜುಲೈನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ
ಮಳೆಗಾಗಿ ದೇವರ ಮೊರೆ
ಸಕಾಲಕ್ಕೆ ಮಳೆಯಾಗದ ಕಾರಣಕ್ಕೆ ರೈತರು ದೇವರ ಮೊರೆ ಹೋಗಿದ್ದಾರೆ. ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದ ಗುರ್ಜಿ ಪೂಜೆ, ಹೊಲದ ಮಣ್ಣಿನಲ್ಲಿ ಈಶ್ವರ ಮತ್ತು ನಂದಿ ಮೂರ್ತಿಯನ್ನು ತಯಾರಿಸಿ, ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.