ADVERTISEMENT

ಮನೆಯಲ್ಲಿಯೇ ಪ್ರಾರ್ಥನೆ: ಸರಳ ಈದ್‌ ಆಚರಣೆಗೆ ಸಜ್ಜು

ಕುಟುಂಬದವರೊಂದಿಗೆ ಇಫ್ತಾರ್ ಕೂಟ

ಸಿದ್ದನಗೌಡ ಪಾಟೀಲ
Published 13 ಮೇ 2021, 8:49 IST
Last Updated 13 ಮೇ 2021, 8:49 IST
ರಂಜಾನ್‌ ಪ್ರಯುಕ್ತ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಸಿರಾಜ್‌ ಬಿಸರಳ್ಳಿ ಕುಟುಂಬದವರು ಇಫ್ತಾರ್‌ ಕೂಟದಲ್ಲಿ ಪ್ರಾರ್ಥನೆ ಸಲ್ಲಿಸಿ ಉಪಾಹಾರ ಸೇವಿಸಿದರು
ರಂಜಾನ್‌ ಪ್ರಯುಕ್ತ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಸಿರಾಜ್‌ ಬಿಸರಳ್ಳಿ ಕುಟುಂಬದವರು ಇಫ್ತಾರ್‌ ಕೂಟದಲ್ಲಿ ಪ್ರಾರ್ಥನೆ ಸಲ್ಲಿಸಿ ಉಪಾಹಾರ ಸೇವಿಸಿದರು   

ಕೊಪ್ಪಳ: ರಂಜಾನ್‌ ತಿಂಗಳು ಮುಸ್ಲಿಂ ಸಮುದಾಯದವರಿಗೆ ಪವಿತ್ರವಾದದ್ದು, ಈ ತಿಂಗಳಲ್ಲಿ ಉಪವಾಸ, ಪ್ರಾರ್ಥನೆ, ದಾನಕ್ಕೆ ಆದ್ಯತೆ ನೀಡಲಾಗುತ್ತದೆ. ಲಾಕ್‌ಡೌನ್‌ ಕಾರಣ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಪ್ರತಿವರ್ಷ ರಂಜಾನ್‌ ಮಾಸಾಚರಣೆಯಲ್ಲಿ ನಗರದ ರಸ್ತೆಗಳಲ್ಲಿ ವಿವಿಧ ಸಾಮಗ್ರಿ ಖರೀದಿ, ತರೇಹವಾರಿ ತಿಂಡಿ, ತಿನಿಸು ಮಾರಾಟದ ಭರಾಟೆ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಈ ಬಾರಿ ತಮ್ಮ, ತಮ್ಮ ಮನೆಗಳಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಈ ಪವಿತ್ರ ಮಾಸದಲ್ಲಿ ಐದು ಹೊತ್ತು ಮಸೀದಿಗೆ ತೆರಳಿ ನಮಾಜ್‌ ಮಾಡಲಾಗುತ್ತಿತ್ತು. ತಿಂಗಳ ಕೊನೆಯಲ್ಲಿ ಹೊಸ ಬಟ್ಟೆ, ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಪ್ರವಚನ ನಡೆಯುತ್ತಿತ್ತು. ಆದರೆ ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮನೆಯಲ್ಲಿಯೇ ನಮಾಜ್‌ ಮಾಡಲಾಗುತ್ತದೆ. ಜತೆಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರೆವೇರಿಸಲಾಗುತ್ತದೆ.

ADVERTISEMENT

ನಸುಕಿನ ಜಾವ 4 ಗಂಟೆಯಿಂದಲೇ ಆರಂಭವಾಗುವ ಸಹರಿ ಪ್ರಕ್ರಿಯೆ ಅಲ್ಪ ಉಪಾಹಾರದ ನಂತರ ಸಂಜೆ 7 ಕ್ಕೆ ಇಫ್ತಾರ್‌ನೊಂದಿಗೆ ಮುಕ್ತಾಯವಾಗುತ್ತದೆ. ಲಾಕ್‌ಡೌನ್‌ ಕಾರಣ ದಿನಸಿ, ಹಣ್ಣುಗಳ ಖರೀದಿ, ಖರ್ಜೂರ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಸಮಯಾವಕಾಶ ಸಾಲದೇ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಒಂದು ತಿಂಗಳು ಉಪವಾಸ ಪ್ರಕ್ರಿಯೆಯನ್ನು ವಾರಕ್ಕೆ ಸೀಮಿತಗೊಳಿಸಿದ್ದಾರೆ.

ವಿವಿಧ ಸಮಾಜದ ಗಣ್ಯರು ಸೌಹಾರ್ದಕ್ಕೆ ಏರ್ಪಡಿಸುವ ಇಫ್ತಾರ್ ಕೂಟವನ್ನು ಲಾಕ್‌ಡೌನ್‌ ಕಾರಣ ರದ್ದು ಮಾಡಲಾಗಿದೆ. ಕುರಾನ್‌ ಪಠಣ, ಮನೆ ಮಂದಿಯೊಂದಿಗೆ ಅಲ್ಲಾಹುವಿನ ಸ್ಮರಣೆಯೊಂದಿಗೆ ಉಪಾಹಾರ ಸೇವಿಸಿ ಅಂದಿನ ಉಪವಾಸವನ್ನು ಮುಕ್ತಾಯಗೊಳಿಸುತ್ತಿದ್ದಾರೆ.

‘ನೆರೆ ಮನೆಯವನೂ ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ’ ಎಂಬ ಪ್ರವಾದಿ ಮುಹ್ಮದ್‌(ಸ)ರ ಸಂದೇಶದಂತೆ ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ನೂರಾರು ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಿದೆ. ಸಮುದಾಯದ ವತಿಯಿಂದ ನಮ್ಮ ನೆರೆಹೊರೆಯಲ್ಲಿರುವ ಅಂತಹವರಿಗೆ ಸಹಾಯ ಹಸ್ತ ಚಾಚೋಣ. ಇತಿಹಾಸದಲ್ಲಿ ಎಂದೂ ಈ ರೀತಿಯ ರಂಜಾನ್‌ ಮಾಸ ಘಟಿಸಿಲ್ಲ’ ಎಂಬುದು ಇಸ್ಲಾಂ ಧರ್ಮದಹಿರಿಯರ ಅಭಿಪ್ರಾಯವಾಗಿದೆ.

ಪವಿತ್ರ ರಂಜಾನ್‌ ಮಾಸ ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರು ಒಂದು ತಿಂಗಳ ಉಪವಾಸ ಮಾಡಿಕೊನೆಯ ದಿನ ಆಚರಿಸುವ ಈದ್‌ ಉಲ್‌ ಫಿತ್ರ್‌ ಆಚರಣೆಯೇ ರಂಜಾನ್‌ ಹಬ್ಬ. ದೇಶದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕು ತೊಲಗಲಿ ಎಂಬ ವಿಶೇಷ ಪ್ರಾರ್ಥನೆಯೊಂದಿಗೆ ಈ ಬಾರಿಯ ರಂಜಾನ್‌ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.