ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಮೂರನೇ ಆರೋಪಿಯನ್ನು ಕೊಪ್ಪಳ ಜಿಲ್ಲೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದು, ಗಂಗಾವತಿಗೆ ಕರೆ ತಂದಿದ್ದಾರೆ.
ಗಂಗಾವತಿಯ ಸಾಯಿ ನಗರದ ನಿವಾಸಿ ಶರಣಬಸವ ಬಂಧಿತ ಆರೋಪಿ. ಘಟನೆ ನಡೆದ ಮರುದಿನ ಇದೇ ಬಡಾವಣೆಯ ಮಲ್ಲೇಶ ಹಂದಿ ಹಾಗೂ ಚೇತನ್ ಸಾಯಿ ಎಂಬುವರನ್ನು ಬಂಧಿಸಲಾಗಿತ್ತು. ಈ ಮೂವರೂ ಆರೋಪಿಗಳು ಗಾರೆ ಕೆಲಸ ಮಾಡುತ್ತಿದ್ದರು.
'ಮೂರನೆ ಆರೋಪಿ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಬೈಕ್ ಜಪ್ತಿ ಮಾಡಲಾಗಿದೆ. ಘಟನೆ ನಡೆದಾಗ ಆರೋಪಿಗಳು ಮದ್ಯ ಸೇವನೆ ಮಾಡಿದ್ದರು ಎನ್ನುವುದು ಸಾಬೀತಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
'ಸಾಣಾಪುರ, ಆನೆಗೊಂದಿ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಿ ಮದ್ಯ ಅಕ್ರಮ ಮಾರಾಟ, ಮಾದಕ ವಸ್ತುಗಳ ಮಾರಾಟವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.