ADVERTISEMENT

ಕುಷ್ಟಗಿ | ಸ್ವಂತ ಖರ್ಚಿನಲ್ಲೇ ಜನರಿಂದ ರಸ್ತೆ ನಿರ್ಮಾಣ

3ನೇ ವಾರ್ಡಿನಲ್ಲಿ ಮೂಲಸೌಲಭ್ಯ ಕೊರತೆ, ಪುರಸಭೆ ನಿರ್ಲಕ್ಷ್ಯಕ್ಕೆ ಆಕ್ರೋಶ

ನಾರಾಯಣರಾವ ಕುಲಕರ್ಣಿ
Published 27 ಏಪ್ರಿಲ್ 2024, 6:05 IST
Last Updated 27 ಏಪ್ರಿಲ್ 2024, 6:05 IST
ಕುಷ್ಟಗಿಯ 3ನೇ ವಾರ್ಡಿನ ನಿವಾಸಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡಿರುವುದು
ಕುಷ್ಟಗಿಯ 3ನೇ ವಾರ್ಡಿನ ನಿವಾಸಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡಿರುವುದು   

ಕುಷ್ಟಗಿ: ನಾಗರಿಕರಿಗೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವುದು ಪುರಸಭೆಯ ಜವಾಬ್ದಾರಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದಲೂ ಜನ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಪುರಸಭೆ ಅಧಿಕಾರಿಗಳು ಬೇಡಿಕೆ ನಿರ್ಲಕ್ಷಿಸುತ್ತ ಬಂದಿರುವುದಕ್ಕೆ ಬೇಸತ್ತ ನಿವಾಸಿಗಳು ಸ್ವಂತ ಖರ್ಚಿನಲ್ಲಿಯೇ ಕಾಮಗಾರಿ ಕೈಗೊಂಡಿರುವುದು ಪಟ್ಟಣದ 3ನೇ ವಾರ್ಡಿನಲ್ಲಿ ಕಂಡುಬಂದಿದೆ.

ಕೊಪ್ಪಳ ಮುಖ್ಯ ರಸ್ತೆ ಮತ್ತು ಮೂರನೇ ವಾರ್ಡಿನ ಮಧ್ಯೆ ಹಳೆಯ ಕಾಲುವೆ ಇದ್ದು, ಸದ್ಯ ಅದು ಚರಂಡಿ ರೂಪ ಪಡೆದಿದೆ. ಆದರೆ, ಕೊಳಚೆ ನೀರು ಮುಂದೆ ಹರಿದು ಹೋಗುವುದಕ್ಕೆ ದಾರಿಯೇ ಇಲ್ಲ. ವಾರ್ಡಿನ ನಿವಾಸಿಗಳಿಗೆ ಮುಖ್ಯರಸ್ತೆಗೆ ಸಂಪರ್ಕ ಇಲ್ಲದೇ ಗೋಳು ಹೇಳತೀರದಷ್ಟಾಗಿತ್ತು. ಅದೇ ರೀತಿ ಈ ವಾರ್ಡಿನಲ್ಲಿ ಪ್ರಭಾವಿಗಳ ಮನೆಗಳ ಸುತ್ತ ಮಾತ್ರ ಡಾಂಬರ್‌ ರಸ್ತೆಗಳಿವೆ. ಆದರೆ, ಸಾಮಾನ್ಯ ಜನರು ವಾಸಿಸುವ ಸ್ಥಳಗಳಲ್ಲಿ ಈಗಲೂ ರಸ್ತೆಗಳು ಅಭಿವೃದ್ಧಿಗೊಂಡಿಲ್ಲ. ತಗ್ಗು ಗುಂಡಿಗಳಿಂದ ಕೂಡಿದ ದಾರಿಯಲ್ಲಿಯೇ ಜನರು ನಡೆದಾಡುವುದಕ್ಕೆ ಹರಸಾಹಸ ಪಡಬೇಕು. ಮಳೆಗಾಲದಲ್ಲಂತೂ ಎಲ್ಲೆಂದರಲ್ಲಿ ನೀರು ಮಡುಗಟ್ಟುತ್ತದೆ ಎಂಬ ಅಳಲು ಅಲ್ಲಿಯ ಜನರದು.

ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಮನವಿ ಕೊಟ್ಟು ಕೊಟ್ಟು ಬೇಸತ್ತ ಸಂಘದ ಸದಸ್ಯರು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ ಎಂದರಿತು ಈಗ ತಾವೇ ದಾರಿ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ADVERTISEMENT

ಮಳೆನೀರು, ಮನೆಯ ಕೊಳಚೆ ನೀರು ಹರಿದುಹೋಗುವುದಕ್ಕೆ ಕಾಲುವೆಗೆ ಅಡ್ಡಲಾಗಿ ಸಿಮೆಂಟ್‌ ಕೊಳವೆಗಳನ್ನು ಜೋಡಿಸಿ ಜೆಸಿಬಿ ಯಂತ್ರದ ಮೂಲಕ ನೆಲ ಸಮತಟ್ಟು ಮಾಡಿ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಂಡಿದ್ದಾರೆ. ಇದಕ್ಕಾಗಿ ಅಂದಾಜು ₹ 9 ಸಾವಿರ ಖರ್ಚಾಗಿದ್ದು ಅದಕ್ಕಾಗಿ ಯಾರ ಬಳಿಯೂ ಕೈಯೊಡ್ಡದೇ ತಾವೇ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿಕೊಂಡು ಖರ್ಚು ನಿಭಾಯಿಸಿದ್ದಾರೆ.

ಹಣ ಬಂದರೂ ಕೆಲಸವಿಲ್ಲ: ಎರಡು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಈ ಕಾಲುವೆಗೆ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ಸುಮಾರು ₹ 40 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಗುತ್ತಿಗೆದಾರರಿಗೆ ಕೆಲಸದ ಆದೇಶವನ್ನೂ ನೀಡಲಾಗಿತ್ತು. ಆದರೆ, ಕಾಲುವೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಲುವೆ ಜಾಗ ಒತ್ತುವರಿಯಾಗಿದ್ದು ಎಷ್ಟು ಎಂಬುದನ್ನು ನಿಖರವಾಗಿ ಗುರುತಿಸಿ ತೆರವುಗೊಳಿಸುವಲ್ಲಿ ಪುರಸಭೆ ವಿಫಲವಾಗಿದೆ. ಕಾಟಾಚಾರಕ್ಕೆ ಪರಿಶೀಲನೆ ನಾಟಕವಾಡುತ್ತಿದೆ. ಪುರಸಭೆಯ ಕೆಲ ಪ್ರಭಾವಿ ಸದಸ್ಯರೇ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದ್ದಾರೆ. ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸುತ್ತ ಬಂದಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಅಲ್ಲಿಯ ಕೆಲ ನಿವಾಸಿಗಳು ಆರೋಪಿಸಿದರು. ಮಾಹಿತಿಗಾಗಿ ಸಂಪರ್ಕಿಸಿದರೆ ಪುರಸಭೆ ಮುಖ್ಯಾಧಿಕಾರಿ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಮತದಾನ ಬಹಿಷ್ಕಾರಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪುರಸಭೆ ಆಡಳಿತ ಮಂಡಳಿ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜನ ಬೀದಿಗಿಳಿದು ಹೋರಾಟ ನಡೆಸುವ ಅನಿರ್ವಾಯತೆ ಸೃಷ್ಟಿಯಾಗಬಹುದು.

-ಡಿ.ಬಿ.ಗಡೇದ ಅಧ್ಯಕ್ಷ ರಹವಾಸಿಗಳ ಸಂಘ

ಮತದಾನ ಬಹಿಷ್ಕಾರದ ವಿಚಾರ ಗೊತ್ತಾಗಿಲ್ಲ ಆದರೂ ಅಲ್ಲಿಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪುರಸಭೆಗೆ ಸೂಚಿಸುತ್ತೇವೆ.

-ನಿಂಗಪ್ಪ ಮಸಳಿ ಅಧ್ಯಕ್ಷ ತಾಲ್ಲೂಕು ಸ್ವೀಪ್‌ ಸಮಿತಿ

ಮತದಾನ ಬಹಿಷ್ಕಾರಕ್ಕೆ ಚಿಂತನೆ 3ನೇ ವಾರ್ಡಿಗೆ ಮೂಲ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಪುರಸಭೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿರುವ ಅಲ್ಲಿಯ ಕೆಲ ಜನರು ಇದೇ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದು ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ ಎಂಬ ಚಿಂತನೆ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ. ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಪುರಸಭೆ ಇಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಮತದಾನ ಬಹಿಷ್ಕಾರದ ವಿಚಾರ ಕೆಲ ಜನರಿಂದ ವ್ಯಕ್ತವಾಗಿರುವುದು ನಿಜ ಆದರೆ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನಿವಾಸಿಗಳಾದ ಅಭಿನಂದನ ಗೋಗಿ ಎ.ವೈ.ಲೋಕರೆ ಇತರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.