ADVERTISEMENT

ರಸ್ತೆಯಷ್ಟೇ ಅಭಿವೃದ್ಧಿ; ಸ್ವಚ್ಛತೆ ಮರೀಚಿಕೆ

ಎರಡು ಬಡಾವಣೆಗಳನ್ನು ಒಳಗೊಂಡ ನಗರಸಭೆ ವ್ಯಾಪ್ತಿಯ ನಾಲ್ಕನೇ ವಾರ್ಡ್‌

ಪ್ರಮೋದ
Published 12 ಸೆಪ್ಟೆಂಬರ್ 2022, 22:00 IST
Last Updated 12 ಸೆಪ್ಟೆಂಬರ್ 2022, 22:00 IST
ಕೊಪ್ಪಳದ ನಾಲ್ಕನೇ ವಾರ್ಡ್‌ ವ್ಯಾಪ್ತಿಯ ವಡ್ಡರ ಓಣಿಯಲ್ಲಿ ರಸ್ತೆ ಅವ್ಯವಸ್ಥೆ
ಕೊಪ್ಪಳದ ನಾಲ್ಕನೇ ವಾರ್ಡ್‌ ವ್ಯಾಪ್ತಿಯ ವಡ್ಡರ ಓಣಿಯಲ್ಲಿ ರಸ್ತೆ ಅವ್ಯವಸ್ಥೆ   

ಕೊಪ್ಪಳ: ಒಂದು ಸುತ್ತು ಹಾಕಿ ಬಂದರೆ ಮತ್ತೆ ಅದೇ ಸ್ಥಳಕ್ಕೆ ವಾಪಸ್ ಬರುತ್ತೇವೆ; ಅಷ್ಟೊಂದು ಚಿಕ್ಕದಾದ ನಗರಸಭೆ ವ್ಯಾಪ್ತಿಯ ನಾಲ್ಕನೇ ವಾರ್ಡ್‌ನಲ್ಲಿ ಉತ್ತಮ ರಸ್ತೆಗಳಾಗಿವೆ. ಆದರೆ, ಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತಿದೆ.

ಪಲ್ಟನ್ ಗಲ್ಲಿ ಮತ್ತು ವಡ್ಡರ ಓಣಿ ಇವುಗಳಷ್ಟೇ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಅಂದಾಜು 2,400 ಮತದಾರರು ಇದ್ದಾರೆ. ಇತ್ತೀಚಿಗಷ್ಟೇ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಸಿದ್ಧಗೊಳ್ಳುತ್ತಿದೆ. ಒಂದು ಕನ್ನಡ ಮತ್ತು ಉರ್ದು ಶಾಲೆಗಳಿವೆ. ಹಲವು ವರ್ಷಗಳ ಹಿಂದೆ ಈ ವಾರ್ಡ್‌ನ ಜನರಲ್ಲಿ ಹಲವರು ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದರು. ಇನ್ನೂ ಕೆಲವರು ಮನೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಈ ವಾರ್ಡ್‌ನಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣ ಸುಧಾರಣೆ ಕಂಡಿದೆ.

ವಾರ್ಡ್‌ನ ಎರಡೂ ಬಡಾವಣೆಗಳಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಚರಂಡಿಯಲ್ಲಿ ಹುದುಗಿದ್ದ ಕಸವನ್ನು ತೆಗೆಯಲಾಗಿದೆಯಾದರೂ ಅದನ್ನು ವಿಲೇವಾರಿ ಮಾಡಿಲ್ಲ. ಸಮರ್ಪಕ ಕಸ ವಿಲೇವಾರಿ, ಸ್ವಚ್ಛತೆ, ಪಾಳು ಬಿದ್ದ ಮನೆಗಳ ಹಾವಳಿಯಿಂದ ಅಪಾಯ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಸ್ವಚ್ಛತೆ ಕಾಪಾಡಿಕೊಳ್ಳದ ಕಾರಣ ರೋಗದ ಭೀತಿ ಈ ವಾರ್ಡ್‌ನ ಜನರನ್ನು ಕಾಡುತ್ತಲೇ ಇದೆ. ಸ್ವಲ್ಪ ಮಳೆಯಾದರೂ ವಡ್ಡರ ಓಣಿ ವ್ಯಾಪ್ತಿಯ ಮನೆಗಳಲ್ಲಿ ಮನೆ ಮುಂದೆಯೇ ನೀರು ನಿಲ್ಲುತ್ತಿದ್ದು, ಆಗ ಮನೆಯಿಂದಲೂ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರು ಸ್ಥಳೀಯ ನಿವಾಸಿಗಳದ್ದು.

ವಡ್ಡರ ಓಣಿಯಲ್ಲಿ 15 ವರ್ಷಗಳಿಂದ ವಾಸವಿರುವ ಗೀತವ್ವ ‘ಇನ್ನಷ್ಟು ಉತ್ತಮ ರಸ್ತೆಗಳಾಗಬೇಕು. ಚರಂಡಿ ವ್ಯವಸ್ಥೆ ಸರಿ ಹೋಗಬೇಕು. ಕಸ ವಿಲೇವಾರಿಗೆ ಬರುವ ವಾಹನಗಳು ಇಲ್ಲಿಗೆ ಬರುವಷ್ಟರಲ್ಲಿಯೇ ತುಂಬಿಕೊಂಡು ಬಂದಿರುತ್ತವೆ. ಇಲ್ಲಿನ ಕಸವನ್ನು ಹಾಕಲು ಜಾಗವೇ ಇರುವುದಿಲ್ಲ. ಸ್ವಚ್ಛತೆ ಇಲ್ಲದ ಕಾರಣ ಸಾಂಕ್ರಾಮಿಕ ರೋಗದ ಭೀತಿ ಇದ್ದೇ ಇದೆ’ ಎಂದರು.

ಕಸ ವಿಲೇವಾರಿ, ಚರಂಡಿ ಸಮಸ್ಯೆ ಇದೆ. ಮೂರ್ನಾಲ್ಕು ದಿನಗಳಿಗೊಮ್ಮೆ ಕಸ ಸಂಗ್ರಹ ಮಾಡಲಾಗುತ್ತಿದೆ. ಅನೇಕರು ಶೌಚಾಲಯದ ಸಂಪರ್ಕವನ್ನು ಚರಂಡಿಗೆ ಕಲ್ಪಿಸಿದ್ದಾರೆ.
ಕುತುಬುದ್ದೀನ್‌ ಹವಾಲ್ದಾರ್‌, ಪಲ್ಟಾನ್‌ ಗಲ್ಲಿ ನಿವಾಸಿ

ಶಾಸಕ ರಾಘವೇಂದ್ರ ಹಿಟ್ನಾಳ ಅವರ ಕಾಳಜಿಯಿಂದ ವಾರ್ಡ್‌ ಅಭಿವೃದ್ಧಿಯಾಗಿದೆ. ಈಗ ₹1 ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಬಾಕಿ ಉಳಿದ ಕೆಲಸಗಳನ್ನು ಮಾಡುವೆ.
ಅಕ್ಬರ್‌ ಪಾಷಾ, 4ನೇ ವಾರ್ಡ್‌ನ ಸದಸ್ಯ

ನಮ್ಮ ಓಣಿಯಲ್ಲಿ ರಸ್ತೆ ಸರಿಯಿಲ್ಲ. ಮಳೆ ಬಂದರೆ ಮನೆಯಿಂದ ಹೊರಗೆ ಬರುವುದೇ ದುಸ್ತರವಾಗಿದೆ. ಆದ್ಯತೆ ನೀಡಿ ರಸ್ತೆ ನಿರ್ಮಿಸಬೇಕು.
ನಾಗವ್ವ, ವಡ್ಡರ ಓಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.