ADVERTISEMENT

ಕುಷ್ಟಗಿ: ಬದಲಾಗದ ರಸ್ತೆ ಸ್ಥಿತಿ, ಸವಾರರಿಗೆ ದುರ್ಗತಿ

ಕೆಲವು ಕಡೆ ಮಣ್ಣಿನ ರಸ್ತೆಯೇ ಗತಿ

ನಾರಾಯಣರಾವ ಕುಲಕರ್ಣಿ
Published 15 ಡಿಸೆಂಬರ್ 2019, 19:45 IST
Last Updated 15 ಡಿಸೆಂಬರ್ 2019, 19:45 IST
5ನೇ ವಾರ್ಡ್‌ನಲ್ಲಿ ರಸ್ತೆ ಇಲ್ಲದಿರುವುದು
5ನೇ ವಾರ್ಡ್‌ನಲ್ಲಿ ರಸ್ತೆ ಇಲ್ಲದಿರುವುದು   

ಕುಷ್ಟಗಿ: ‘ಒಂದೆರೆಡು ಮುಖ್ಯರಸ್ತೆಗಳನ್ನು ಬಿಟ್ಟರೆ ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಹದಗೆಟ್ಟಿವೆ. ಪ್ರತಿ ವರ್ಷ ರಸ್ತೆ ನಿರ್ಮಾಣ, ದುರಸ್ತಿ ಹೆಸರಿನಲ್ಲಿ ಸಾಕಷ್ಟು ಹಣ ಖರ್ಚಾಗುತ್ತಿದೆ. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಕರ್ತವ್ಯ, ಜವಾಬ್ದಾರಿ ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಅಳೆಯಲು ಬೇರೆ ಎಲ್ಲೂ ಹೋಗಬೇಕಿಲ್ಲ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿದರೆ ವಸ್ತುಸ್ಥಿತಿ ಅರ್ಥವಾಗುತ್ತದೆ’.

ಇಲ್ಲಿಯ ನಿವಾಸಿಗಳು ಹೇಳುವ ಮಾತಿದು. ಪಟ್ಟಣದ ಹಳೆಯ ಮತ್ತು ಹೊಸ ಹೀಗೆ ಯಾವುದೇ ಬಡಾವಣೆಗೆ ತೆರಳಿದರೂ ಇಂಥ ಮಾತುಗಳು ಕೇಳಿ ಬರುತ್ತವೆ. ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಪ್ರಮುಖ ಅಡ್ಡಿಯೇ ಇಲ್ಲಿಯ ರಸ್ತೆಗಳು. ಆಟೊ, ದ್ವಿಚಕ್ರ, ತ್ರಿಚಕ್ರ ಇತರೆ ವಾಹನಗಳಲ್ಲಿ ಸಂಚರಿಸುವ ಸವಾರರು ನಿತ್ಯ ನೋವು ಅನುಭವಿಸುತ್ತಾರೆ. ರಸ್ತೆ ದುರಸ್ತಿ ಕೈಗೊಳ್ಳುವಂತೆ ನಿವಾಸಿಗಳು ಹಲವು ಬಾರಿ ಮನವಿ ಮಾಡಿದೂ ಈವರೆಗೆ ಅವರಿಗೆ ಸ್ಪಂದನೆ ಸಿಕ್ಕಿಲ್ಲ.

ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ನಂತರ ಪುರಸಭೆಯಾಗಿ ಇಲ್ಲಿಯ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಏರಿಕೆ ಕಂಡಿದೆ. ಆದರೆ, ರಸ್ತೆಗಳ ಪರಿಸ್ಥಿತಿ ಮಾತ್ರ ಕಿಂಚಿತ್ತೂ ಸುಧಾರಿಸಿಲ್ಲ. ಚುನಾವಣೆ ಸಮೀಪಿಸಿದಾಗಲೆಲ್ಲ, ವಿವಿಧ ಪಕ್ಷಗಳ ಮುಖಂಡರು ಅಭಿವೃದ್ಧಿಯ ಭರವಸೆ ನೀಡುತ್ತಾರೆ. ನಂತರದ ದಿನಗಳಲ್ಲಿ ಭರವಸೆ ಈಡೇರುವುದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಕ್ರಿಯಿಸುವುದಿಲ್ಲ’ಎನ್ನುತ್ತಾರೆ ವೀರಭದ್ರಪ್ಪ ಹೊಸಗೇರಿ ಮತ್ತು ಮಲ್ಲಿಕಾರ್ಜುನಗೌಡ ಪಾಟೀಲ.

ADVERTISEMENT

ಕೆಲ ಕಡೆ ರಸ್ತೆಗಳ ಕಾಮಗಾರಿ ನಡೆದಿದೆಯಾದರೂ ಅದು ಗುಣಮಟ್ಟದಿಂದ ಕೂಡಿಲ್ಲ. ಹಲವು ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪವಿದೆ.ಕಾಲೇಜು ರಸ್ತೆ, ಪುರಸಭೆಯಿಂದ ಹಳೆ ಬಜಾರ ರಸ್ತೆಗಳು ಮಾತ್ರ ಗುಣಮಟ್ಟ ಹೊಂದಿವೆ. ಆದರೆ, ಬೇರೆ ರಸ್ತೆಗಳಲ್ಲಿ ಅದೇ ತರಹದ ಗುಣಮಟ್ಟ ಇರುವುದೆಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಹಳೆಬಜಾರ್‌ ಶಾಮೀದಲಿ ಕಟ್ಟಿಯಿಂದ ತಹಶೀಲ್ದಾರ್ ಕಚೇರಿ ಕಾಂಕ್ರೀಟ್ ರಸ್ತೆಯಲ್ಲಿನ ಜಲ್ಲಿಕಲ್ಲುಗಳು ವರ್ಷದೊಳಗೇ ಕಿತ್ತು ಬಂದು ಪುನಃ ಗುಂಡಿಗಳು ನಿರ್ಮಾಣ ಆಗಿವೆ. 4ನೇ ವಾರ್ಡ್‌ನಲ್ಲಿ ಶಾಸಕರ ನಿವಾಸಕ್ಕೆ ತೆರಳುವ ಮಾರ್ಗದ ಬಲ ಭಾಗದಲ್ಲಿ ಮತ್ತು ರೇಣುಕಾಚಾರ್ಯ ಕಲ್ಯಾಣ ಮಂಟಪದ ಆಸುಪಾಸಿನಲ್ಲಿ ಕೆಲ ಅಡ್ಡ ರಸ್ತೆಗಳು ಗಮನ ಸೆಳೆಯುತ್ತವೆ.

7 ರಿಂದ 23ನೇ ವಾರ್ಡ್‌ನಲ್ಲಿ ಇರುವ ಬರುವ ಬಹುತೇಕ ರಸ್ತೆಗಳ ಸ್ಥಿತಿ ಹದಗೆಟ್ಟಿವೆ. ರಸ್ತೆ, ಚರಂಡಿಗಳಿಗೆ ಸಂಬಂಧವೇ ಇಲ್ಲ. ಗುತ್ತಿಗೆದಾರರ ಬಿಲ್‌ ಪಾವತಿಯಾಗುವವರೆಗೆ ಮಾತ್ರ ರಸ್ತೆಗಳಿರುತ್ತವೆ. ರಸ್ತೆ ಕಾಮಗಾರಿ ಯಾವಾಗ ನೆರವೇರುವುದೋ ನೋಡಬೇಕು’ ಎಂದು ಸ್ಥಳೀಯರು ಹೇಳುತ್ತಾರೆ.

‘ರಾಜಕೀಯ ಹಿಂಬಾಲಕರೇ ಗುತ್ತಿಗೆದಾರರು’
ಪಟ್ಟಣದ ರಸ್ತೆ, ಚರಂಡಿ ಹೀಗೆ ಯಾವುದೇ ಅಭಿವೃದ್ಧಿ ಕೆಲಸ ನಡೆದರೂ ರಾಜಕೀಯ ಕಾರ್ಯರ್ತರು, ಪ್ರಮುಖ ರಾಜಕಾರಣಿಗಳ ಹಿಂಬಾಲಕರೇ ಗುತ್ತಿಗೆದಾರರು.

‘ಈ ಕೆಲಸ ಮಾಡುವುದಕ್ಕೆ ಲೈಸನ್ಸ್‌ ಇದ್ದರೆ ಸಾಕು. ಸಿವಿಲ್‌ ಕಾಮಗಾರಿಗಳ ಅರ್ಹತೆಯೇ ಬೇಕಾಗಿಲ್ಲ. ಗುತ್ತಿಗೆ ಕೆಲಸ ಕೊಡಿಸಿ ಹಿಂಬಾಲಕರನ್ನು ಹಿಡಿದಿಟ್ಟುಕೊಳ್ಳುವುದೇ ಕೆಲ ಪ್ರತಿನಿಧಿಗಳ ಪಾಲಿನ ದೊಡ್ಡ ಕೆಲಸ. ಕಳಪೆ ಕೆಲಸವನ್ನು ಯಾರೂ ಪ್ರಶ್ನಿಸುವಂತಿಲ್ಲ.ಇದು ಗೊತ್ತಿದ್ದರೂ 'ಏ ಅಂವ ನಮ್ಮ ಹುಡ್ಕ ಹೋಗಲಿ ಬಿಡು ಚೂರು ಹೆಚ್ಚುಕಡಿಮಿ ಆಗಿರತೈತಿ’ ಎಂದು ರಾಜಕಾರಣಿಗಳು ಬಿಲ್‌ಪಾವತಿ ಮಾಡಿಸಿ ಕೊಡುತ್ತಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಗರ್ಭಿಣಿಯರ ಗೋಳು ಕೇಳೋರಿಲ್ಲ
ಪಟ್ಟಣದಲ್ಲಿ ಸಂಚರಿಸುವಾಗ ಅದರಲ್ಲೂ ವೃದ್ಧರು, ಗರ್ಭಿಣಿಯರು, ಬಾಣಂತಿಯರು, ರೋಗಿಗಳು ಆಸ್ಪತ್ರೆ, ಮನೆಗೆ ವಾಹನಗಳಲ್ಲಿ ಬಂದು ಹೋಗುವಾಗ ಅನುಭವಿಸುವ ನೋವು ಮಾತಿನಲ್ಲಿ ಹೇಳಲಾಗದು. ಹೆಜ್ಜೆಹೆಜ್ಜೆಗೂ ಗುಂಡಿ, ಏರು ಇಳಿವು, ಅವೈಜ್ಞಾನಿಕ ಹಂಪ್ಸ್‌ಗಳು ಜೀವ ಹಿಂಡುತ್ತವೆ. ಹೆರಿಗೆ ನೋವು ತಡೆದುಕೊಳ್ಳಬಹುದು, ಆದರೆ ರಸ್ತೆಯಲ್ಲಿ ಅನುಭವಿಸುವುದು ಬಹಳಷ್ಟು ತ್ರಾಸು ಎಂಬುದು ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ.

*
ಮುಖ್ಯರಸ್ತೆ ಬರುವವರೆಗೂ ಜೀವ ಕೈಯಲ್ಲಿ ಹಿಡಿದುಕೊಂಡೆ ಆಟೊ ಓಡಿಸಬೇಕು. ವೃದ್ಧರು, ಗರ್ಭಿಣಿಯರನ್ನು ಕರೆದೊಯ್ಯುವುದಕ್ಕೆ ಹೆದರಿಕೆಯಾಗುತ್ತದೆ. ಹಾಳಾದ ರಸ್ತೆಗಳಿಂದಲೇ ಪಟ್ಟಣದ ಬಹಳಷ್ಟು ಜನ ಸೊಂಟದ ನೋವಿನಿಂದ ಬಳಲುವಂತಾಗಿದೆ.
-ಸಯ್ಯದ್, ಆಟೋ ಚಾಲಕ.

*
ಹಳೆಯ ಬಜಾರದಲ್ಲಿ ಒಂದು ಭಾಗದ ರಸ್ತೆಯಲ್ಲಿ ಜಲ್ಲಿಕಲ್ಲು ಕಿತ್ತಿಲ್ಲ, ಆದರೆ, ವರ್ಷದ ನಂತರ ನಿರ್ಮಿಸಿದ ಇನ್ನೊಂದು ಕಾಂಕ್ರೀಟ್‌ ರಸ್ತೆ ಆರು ತಿಂಗಳ ಒಳಗೇ ಹಾಳಾಗಿ ಹೋಗಿದೆ. ಟೆಂಡರ್‌ ಬೇರೆಯವರ ಹೆಸರಿನಲ್ಲಿದ್ದರೂ ಕೆಲಸ ಮಾಡಿದವರು ಸ್ಥಳೀಯ ವ್ಯಕ್ತಿ.
-ಬಸವರಾಜ ಪಟ್ಟಣಶೆಟ್ಟರ, ಹಳೆ ಬಜಾರ ನಿವಾಸಿ

*
ಪಟ್ಟಣದ ಬಹುತೇಕ ವಾರ್ಡುಗಳ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಇಲ್ಲಿ ಹೆಸರಿಗೆ ಮಾತ್ರ ಪುರಸಭೆ ಇದೆ, ಯಾವ ಕುಗ್ರಾಮಗಳಲ್ಲೂ ಇಷ್ಟೊಂದು ಹದಗೆಟ್ಟಿರುವ ರಸ್ತೆಗಳು ಇರಲಿಕ್ಕಿಲ್ಲ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
-ನೀಲಕಂಠಬಾಬು, ವಿಷ್ಣುತೀರ್ಥ ನಗರ ನಿವಾಸಿ

*
ವಿವಿಧೆಡೆಯಿಂದ ಲಭ್ಯವಾದ ಅನುದಾನ ಸದ್ಬಳಕೆ ಮಾಡಿಕೊಂಡು ಎಲ್ಲಾ ಕಡೆ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಗತ್ಯ ಇರುವ ಕಡೆ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು.
ಅಶೋಕ ಪಾಟೀಲ, ಮುಖ್ಯಾಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.