
ಕೊಪ್ಪಳ: ‘ಒಂದು ವರ್ಷದ ಹಿಂದೆ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ನಡೆದಿದ್ದ ಒಬ್ಬ ಇಸ್ರೇಲಿ ಮಹಿಳೆ, ಸ್ಥಳೀಯ ಹೋಂ ಸ್ಟೇ ಒಡತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಒಡಿಶಾದ ಪ್ರವಾಸಿಗನ ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣುವಲ್ಲಿ ಪೊಲೀಸರ ಶ್ರಮ ಸಾಕಷ್ಟಿದೆ’ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಪಿ.ಎಸ್. ಹರ್ಷ ಹೇಳಿದರು.
ಇಲ್ಲಿನ ಎಸ್.ಪಿ. ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಘಟನೆಯನ್ನು ವಿವರವಾಗಿ ಹಂಚಿಕೊಂಡು, ’ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಅನ್ವಯ ಆರೋಪಿಗಳ ಪತ್ತೆಗೆ ಆಗ ಆರು ತಂಡಗಳನ್ನು ರಚಿಸಲಾಗಿತ್ತು. ಬೇರೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಸಾಕ್ಷಿದಾರರು ಸಾಕ್ಷ್ಯ ನುಡಿಯಲು ಹಿಂದೇಟು ಹಾಕುತ್ತಾರೆ. ಆದರೆ ಈ ಪ್ರಕರಣದಲ್ಲಿ ಎಲ್ಲ 101 ಜನ ಸಾಕ್ಷಿ ನುಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಳ್ಳಲಾಗಿದ್ದ 84 ವಸ್ತುಗಳು ಕೂಡ ಆರೋಪ ಸಾಬೀತುಪಡಿಸಲು ಪ್ರಮುಖ ಕಾರಣವಾದವು’ ಎಂದರು.
‘ಘಟನೆ ನಡೆದು 84 ದಿನಗಳಲ್ಲಿಯೇ ನ್ಯಾಯಾಲಯಕ್ಕೆ 750 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದ್ದು, ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ಕೋರ್ಟ್ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ. ಪೊಲೀಸರ ಶ್ರಮಕ್ಕೂ ಬೆಲೆ ಲಭಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಮಾರ್ಗದರ್ಶನದಲ್ಲಿ ತಂಡ ಉತ್ತಮ ಕೆಲಸ ಮಾಡಿದೆ’ ಎಂದು ಶ್ಲಾಘಿಸಿದರು.
ಘಟನೆ ನಡೆದಾಗ ಆಗ ಆರೋಪಿಗಳಾಗಿದ್ದವರ ಪತ್ತೆ, ತಾಂತ್ರಿಕ ತಂಡದವರ ನೈಪುಣ್ಯತೆ, ವೈಜ್ಞಾನಿಕವಾಗಿ ಸಾಕ್ಷಿಗಳ ಸಂಗ್ರಹ, ಪರೀಕ್ಷಾ ವರದಿ ನೀಡುವಲ್ಲಿ ವಹಿಸಿದ ಎಚ್ಚರಿಕೆ, ಬೆರಳು ಮುದ್ರೆ ವರದಿ, ಶ್ವಾನದಳದ ಕಾರ್ಯ ಎಲ್ಲ ಹಂತದಲ್ಲಿಯೂ ನಮ್ಮ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಲಕ್ಷ್ಮೀ ಅವರು ಉತ್ತಮವಾಗಿ ಕೆಲಸ ನಿರ್ವಹಿಸಿದರು’ ಎಂದರು.
ಸಾಣಾಪುರ ಭಾಗದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿದೆಯಲ್ಲವೇ ಎನ್ನುವ ಪ್ರಶ್ನೆಗೆ ‘ಇತ್ತೀಚೆಗೆ ಬಳ್ಳಾರಿಯಲ್ಲಿ ಡ್ರಗ್ಸ್ ದಂಧೆಯ ಕಿಂಗ್‌ಪಿನ್‌ನನ್ನು ಬಂಧಿಸಲಾಗಿದೆ. ಇದರ ಮೇಲೆ ನಿರಂತರವಾಗಿ ಕಣ್ಗಾವಲು ವಹಿಸಲಾಗುವುದು. ಪ್ರವಾಸಿಗರ ಸುರಕ್ಷತೆಗೆ ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆ ಪ್ರಸ್ತಾವ ಇದ್ದು, ಇದರ ಬಗ್ಗೆಯೂ ಗಮನ ಹರಿಸಲಾಗುವುದು. ಅಪರಾಧವನ್ನು ಪೊಲೀಸರು ಅಥವಾ ಯಾರೇ ಮಾಡಿದರೂ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಸೈಬರ್ ಕ್ರೈಂ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ಜಿ.ಎಸ್. ನ್ಯಾಮಗೌಡ, ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಲಕ್ಷ್ಮೀ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಅತ್ಯಾಚಾರ ಅಪರಾಧಿಗಳು ಬಳ್ಳಾರಿ ಜೈಲಿಗೆ
ಕೊಪ್ಪಳ: ಮೂವರು ಅಪರಾಧಿಗಳನ್ನು ಮಂಗಳವಾರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ನ್ಯಾಯಾಲಯದ ಆದೇಶ ಬಂದ ಬಳಿಕ ಅಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸೋಮವಾರ ಮಧ್ಯರಾತ್ರಿ ಅಪರಾಧಿಗಳನ್ನು ಕೊಪ್ಪಳದ ಕಾರಾಗೃಹಕ್ಕೆ ಪೊಲೀಸ್ ಬಿಗಿಬಂದೋಬಸ್ತ್‌ನಲ್ಲಿ ಕರೆ ತಂದು ಮಂಗಳವಾರ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಯಿತು. ಈ ಪ್ರಕರಣದಲ್ಲಿ ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ) ಸಾಯಿಕುಮಾರ್ ಹಾಗೂ ಶರಣಬಸವರಾಜ ಅವರಿಗೆ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ಕೋರ್ಟ್ ಸೋಮವಾರ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಮೊಬೈಲ್‌ನ ಅಸ್ಪಷ್ಟ ಚಿತ್ರವೇ ಆಧಾರವಾಯಿತು
ಘಟನೆ ನಡೆದಾಗ ಸಾಕ್ಷಿಗಳನ್ನು ಸಂಗ್ರಹಿಸಲು ಪೊಲೀಸರಿಗೆ ದೊಡ್ಡಮಟ್ಟದಲ್ಲಿ ಸಾಕ್ಷ್ಯಗಳು ಇರಲಿಲ್ಲ. ಒಡಿಶಾದ ಪ್ರವಾಸಿಗ ಬಿಬಾಶ್ ಮೊಬೈಲ್‌ನಲ್ಲಿ ದಾಖಲಾಗಿದ್ದ ಅಪರಾಧಿಯೊಬ್ಬನ ಅಸ್ಪಷ್ಟ ಚಿತ್ರದ ಜಾಡು ಹಿಡಿದು ಹೊರಟ ಪೊಲೀಸರು ತನಿಖಾ ತಂಡದವರು ಉಳಿದವರನ್ನು ಬಂಧಿಸಿದ್ದರು.
ಕಡಿಮೆ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದನ್ನು ನಾವು ಮಾದರಿಯಾಗಿ ತೆಗೆದುಕೊಂಡಿದ್ದೇವೆ.ಡಾ. ಪಿ.ಎಸ್. ಹರ್ಷ, ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ
ಪ್ರವಾಸಿಗರ ಸುರಕ್ಷತೆಗೆ ಒತ್ತು ಕೊಡಲಾಗುತ್ತಿದೆ. ಸವಾಲಿನಿಂದ ಕೂಡಿದ್ದ ಪ್ರಕರಣದ ಆರೋಪಿಗಳ ಬಂಧನದಿಂದ ಹಿಡಿದು ಶಿಕ್ಷೆಯಾಗುವ ತನಕ ನಮ್ಮ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡಿದ್ದಾರೆ.ಡಾ. ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.