ADVERTISEMENT

ಕೊಪ್ಪಳ: ಶಾಸಕ ಹಿಟ್ನಾಳಗೆ ಸಂಸದ ಸಂಗಣ್ಣ ಚಾಟಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 5:11 IST
Last Updated 19 ಜನವರಿ 2024, 5:11 IST
ಕೊಪ್ಪಳಕ್ಕೆ ಪ್ರತ್ಯೇಕ ಅಂಚೆ ವಿಭಾಗ ಮಂಜೂರು ಆದ ಹಿನ್ನೆಲೆಯಲ್ಲಿ ಶುಕ್ರವಾರ ಕೇಕ್‌ ಕತ್ತರಿಸಿ ಸಂಭ್ರಮಿಸಿದರು
ಕೊಪ್ಪಳಕ್ಕೆ ಪ್ರತ್ಯೇಕ ಅಂಚೆ ವಿಭಾಗ ಮಂಜೂರು ಆದ ಹಿನ್ನೆಲೆಯಲ್ಲಿ ಶುಕ್ರವಾರ ಕೇಕ್‌ ಕತ್ತರಿಸಿ ಸಂಭ್ರಮಿಸಿದರು   

ಕೊಪ್ಪಳ: ‘ಜಿಲ್ಲೆಯ ರಾಜಕಾರಣದ ದುರ್ದೈವಕ್ಕೆ ಇದುವರೆಗೆ ಯಾರೂ ಕೊಪ್ಪಳ ಕ್ಷೇತ್ರದಿಂದ ಗೆದ್ದವರು ಸಚಿವರಾಗಿಲ್ಲ. ಜಿಲ್ಲೆಯ ಬೇರೆ ಕ್ಷೇತ್ರಗಳಿಂದ ಗೆದ್ದು ಮಂತ್ರಿಗಳಾಗುತ್ತಿರುವವರು ಅಭಿವೃದ್ಧಿ ಕೆಲಸಗಳನ್ನು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ’ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.

ಕೊಪ್ಪಳಕ್ಕೆ ವಿಭಾಗೀಯ ಅಂಚೆ ಕಚೇರಿ ಮಂಜೂರಾದ ಹಿನ್ನೆಲೆಯಲ್ಲಿ ನಗರದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜಿಲ್ಲೆಗೆ ಪ್ರತ್ಯೇಕ ವಿಭಾಗ ಮಂಜೂರಾಗಿದ್ದು ನನ್ನ ಬದುಕಿನ ಸಾರ್ಥಕ ಕ್ಷಣಗಳಲ್ಲೊಂದು. ಪ್ರತಿಯೊಬ್ಬರಿಗೂ ಸಾಮಾಜಿಕ ಕಾಳಜಿ ಇರಬೇಕು. ಅಂಚೆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಪೂರಕ ಮಾಹಿತಿಯನ್ನು ಒದಗಿಸಿದ್ದರಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಜಿಲ್ಲೆಗೆ ಪ್ರತ್ಯೇಕ ವಿಭಾಗ ಬರಲು ಅಂಚೆ ಇಲಾಖೆ ಸಿಬ್ಬಂದಿ, ಹೋರಾಟಗಾರರು ಹಾಗೂ ಪತ್ರಕರ್ತರು ಕಾರಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಈಗಿನ ವ್ಯವಸ್ಥೆಯಲ್ಲಿ ನಾನು ಆರಂಭಿಸಿದ ಕಾಮಗಾರಿಯನ್ನು ಮುಂದೆಬರುವ ರಾಜಕಾರಣಿಗಳು ತಿರುಗಿಯೂ ನೋಡುವುದಿಲ್ಲ. ಜಿಲ್ಲಾ ಕೇಂದ್ರಕ್ಕೆ ವಿಶ್ವವಿದ್ಯಾಲಯವನ್ನು ತರಬೇಕು ಎಂದು ಪ್ರಯತ್ನ ಮಾಡುತ್ತಿದ್ದರೂ ಯಾರೂ ಸಹಕಾರ ಕೊಡುತ್ತಿಲ್ಲ. ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಮತ್ತು ತ್ಯಾಗ ಮನೋಭಾವನೆ ಬೇಕು’ ಎಂದರು.

ADVERTISEMENT

ಅಂಚೆ ಇಲಾಖೆಯ ಜೆ.ಎನ್‌. ಹಳ್ಳಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ವಿ.ಬಿ.ರೆಡ್ಡೇರ್‌, ಹನುಂತಪ್ಪ ಅಂಡಗಿ, ಎಂ.ಬಿ.ಅಳವಂಡಿ ಸೇರಿದಂತೆ ಅನೇಕರು ವಿಭಾಗೀಯ ಕಚೇರಿ ಇಲ್ಲಿಗೆ ಬರಲು ಶ್ರಮಿಸಿದ್ದಾರೆ ಎಂದು ಸ್ಮರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.