
ಕೊಪ್ಪಳ: ವಾರಾಂತ್ಯದ ರಜೆಯ ದಿನ ಜಿಲ್ಲಾಕೇಂದ್ರದ ಸಂಗೀತ ಪ್ರೇಮಿಗಳಿಗೆ ಭರಪೂರ ರಸದೌತಣ ಲಭಿಸಿತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಗಾಯಕರು, ವಯೋಲಿನ್ ವಾದಕರು ಹಾಗೂ ತಬಲಾ ಮೋಡಿಗಾರರು ನೀಡಿದ ಪ್ರದರ್ಶನ ಜನಮನಸೂರೆಗೊಂಡಿತು.
ಇಲ್ಲಿನ ಭಾಗ್ಯನಗರದ ಪವರ್ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಗುರು ಪುಟ್ಟರಾಜ ಗವಾಯಿಗಳವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಪ್ತ ಸ್ವರಸಂಗಮ ಸಂಗೀತೋತ್ಸವ ಹಾಗೂ ಪಂಡಿತ್ ಕಲ್ಲಯ್ಯಜ್ಜನವರ ಸಪ್ತ ತುಲಾಭಾರ ಕಾರ್ಯಕ್ರಮ ಸಡಗರದಿಂದ ನಡೆಯಿತು. ಪಂಡಿತ್ ಪಂಚಾಕ್ಷರ ಗವಾಯಿಗಳ 81ನೇ ಪುಣ್ಯಸ್ಮರಣೆ, ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಮ ಸ್ಮರಣೋತ್ಸವವೂ ಜರುಗಿತು.
ಹೆಸರಾಂತ ತಬಲಾ ಕಲಾವಿದ ರಾಜೇಂದ್ರ ನಾಕೋಡ, ವಯೋಲಿನ್ ವಾದಕ ಶಂಕರಕಬಾಡಿ, ಸದಾಶಿವ ಐಹೊಳೆ, ಸದಾಶಿವ ಪಾಟೀಲ್, ಕುಮಾರ ಮರಡೂರು, ವಯೋಲಿನ್ ವಾದಕರಾದ ನಾರಾಯಣ್ ಹಿರೇಕೊಳಚಿ, ಶಂಕರ ಕಬಾಡಿ, ಡಿವೈಎಸ್‌ಪಿ ರುದ್ರೇಶ ಉಜ್ಜಿನಕೊಪ್ಪ ಹೀಗೆ ಅನೇಕ ಕಲಾವಿದರ ಸಂಗೀತದ ಮೋಡಿ ಜನರ ಮೆಚ್ಚುಗೆಗೆ ಕಾರಣವಾಯಿತು. ಆರಂಭಿಕ ಜುಗಲ್‌ಬಂದಿ ಎಲ್ಲರ ಆಕರ್ಷಣೆ ಎನಿಸಿತು.
ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ‘ಅಂತರಂಗವನ್ನು ಶುಚಿತ್ವ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಗದಗನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನಮ್ಮ ಜಿಲ್ಲೆಯವರೇ ಆಗಿದ್ದು, ಅವರೊಂದಿಗೆ ಕೊಪ್ಪಳ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ’ ಎಂದರು.
ಲಿಂಗಸಗೂರಿನ ಮಾಣಿಕೇಶ್ವರ ಮಠದ ಮಾತೆ ನಂದಿಕೇಶ್ವರಿ ಮಾತನಾಡಿ ’ಕೊಪ್ಪಳದಲ್ಲಿಂದು ಸಂಗೀತದ ಸ್ವರಗಾನವೇ ನಡೆದಿದ್ದು, ಸರಸ್ವತಿ ಹಾಗೂ ಲಕ್ಷ್ಮಿ ಇಬ್ಬರನ್ನೂ ಹಿಡಿದಿಟ್ಟ ಆಶ್ರಮ ವೀರೇಶ್ವರ ಪುಣ್ಯಾಶ್ರಮ’ ಎಂದು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ್, ಕಲಾವಿದ ಶಂಕರ ಬಿನ್ನಾಳ, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ, ಸದಸ್ಯರಾದ ಶಿವರಾಮ ಮ್ಯಾಗಳಮನಿ, ಮಂಜಮ್ಮ ಮ್ಯಾಗಳಮನಿ, ನಿವೃತ್ತ ಪ್ರಾಚಾರ್ಯ ರಮಾನಂದ ರಾಜೂರು, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕೊಪ್ಪಳ ಉಪನೋಂದಣಾಧಿಕಾರಿ ಪ್ರದೀಪ ಕುಮಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿಕ್ಷಕರ ಕಲಾ ಸಂಘದ ಪ್ರಮುಖ ಪ್ರಾಣೇಶ ಪೂಜಾರ ನಿರೂಪಿಸಿದರು.
ಒತ್ತಡದಲ್ಲಿರುವ ಮನಸ್ಸಿಗೆ ಸಂಗೀತ ಔಷಧಿಯಿದ್ದಂತೆ. ಸಂಗೀತ ಕೇಳುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಸಕಾರಾತ್ಮಕ ಮನೋಭಾವನೆಗಳು ಕೂಡ ಬರುತ್ತವೆ.ಎ.ವಿ. ಕಣವಿ ವಕೀಲರ ಸಂಘದ ಜಿಲ್ಲಾಧ್ಯಕ್ಷ
ತುಲಾಭಾರಕ್ಕೆ ಒಪ್ಪಿದ 11 ಜನ ಭಕ್ತರು
ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿ ಹೆಡಿಗ್ಗೊಂಡ ಮಾತನಾಡಿ ‘ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಿ ಬದುಕು ರೂಪಿಸುವ ಏಕೈಕ ಮಠ ನಮ್ಮದಾಗಿದ್ದು ನೀವು ತುಲಾಭಾರದ ಮೂಲಕ ನೀಡುವ ಮೊತ್ತ ಮಠದಲ್ಲಿರುವ ಮಕ್ಕಳ ಪ್ರಸಾದಕ್ಕೆ ವಿನಿಯೋಗಿಸಲಾಗುತ್ತದೆ’ ಎಂದರು. ‘ಸಂಪತ್ತು ಹರಿಯುವ ನೀರು ಆಗಬೇಕು. ನಿಂತ ನೀರು ಕೆಡುತ್ತದೆ ದಾನ ಧರ್ಮ ಮಾಡುವ ಮನೆ ಬೆಳಗುತ್ತದೆ’ ಎಂದು ಹೇಳಿ ತುಲಾಭಾರ ಮಾಡುವವರು ತಿಳಿಸಬೇಕು ಎಂದು ಕೋರಿದರು. ಆಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲಿ 11 ಜನ ತುಲಾಭಾರ ಮಾಡಿಸುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.