
ಕಾರಟಗಿ: ಶ್ರೀಶೈಲದ ಸಾರಂಗಧರೇಶ್ವರ ಮಠದ ಸಾರಂಗ ಪೀಠದ ಅನ್ನದಾನ ಛತ್ರಕ್ಕೆ ಕಾರಟಗಿ ಹಾಗೂ ಸಿಂಧನೂರು ತಾಲ್ಲೂಕುಗಳ ವಿವಿಧ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ್ದ 111 ಕ್ವಿಂಟಲ್ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಸೋಮವಾರ ರವಾನಿಸಲಾಯಿತು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಉದ್ಯಮಿಗಳು, ದಲಾಲಿ ವರ್ತಕರು ಹಾಗೂ ಭಕ್ತಾದಿಗಳು ಅಕ್ಕಿ ತುಂಬಿದ ಲಾರಿಗೆ ಪೂಜೆ ಸಲ್ಲಿಸಿ ಕಳುಹಿಸಿದರು.
ವರ್ತಕ ಬಸವರಾಜ ಕುಲಕರ್ಣಿ ಮಾತನಾಡಿ, ‘ಶ್ರೀಶೈಲ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ನಿಮಿತ್ತ ತೆರಳುವ ಸಾವಿರಾರು ಭಕ್ತರಿಗೆ ನಿತ್ಯವೂ ಸಾರಂಗಧರೇಶ್ವರ ಸಾರಂಗ ಪೀಠದ ಅನ್ನದಾನ ಛತ್ರದಲ್ಲಿ ದಾಸೋಹ ನಡೆಯುತ್ತದೆ. ನಿತ್ಯಾನ್ನದಾನದ ವ್ಯವಸ್ಥೆಗೆ ನಮ್ಮ ಭಾಗದ ಸೇವೆ ಎಂದು ಅಕ್ಕಿ ಹಾಗೂ 36 ಡಬ್ಬಿ ಒಳ್ಳೆಣ್ಣೆ, 2 ಕ್ವಿಂಟಲ್ ರವಾ, 2 ಕ್ವಿಂಟಲ್ ಬೆಲ್ಲ, 2 ಕ್ವಿಂಟಲ್ ತೊಗರಿಬೇಳೆ, 3 ಕ್ವಿಂಟಲ್ ಸಕ್ಕರೆ, 45 ಚೀಲ ಮಂಡಾಳ ಕಳುಹಿಸಲಾಯಿತು’ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಚಳ್ಳೂರು, ನಿವೃತ್ತ ಬ್ಯಾಂಕ್ ಅಧಿಕಾರಿ ಶರಣಬಸಯ್ಯ ಹಿರೇಮಠ ಪ್ರಮುಖರಾದ ಎಸ್. ತಿಮ್ಮಣ್ಣ ಹಾಲಸಮುದ್ರ, ಅಯ್ಯಪ್ಪ ಉಪ್ಪಾರ, ಮಲ್ಲಯ್ಯಸ್ವಾಮಿ ಹಂಚಿನಾಳಮಠ, ಕಲ್ಯಾಣಪ್ಪ ಚಿನಿವಾಲ, ಮಲ್ಲಿಕಾರ್ಜುನ ಹಂಚಿನಾಳಮಠ, ಹಣವಾಳ ವೀರಯ್ಯ ಇತರ ಭಕ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.