ADVERTISEMENT

ಹನುಮಸಾಗರ | ಮನೆಗೆ ಚರಂಡಿ ನೀರು: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:40 IST
Last Updated 26 ಅಕ್ಟೋಬರ್ 2025, 7:40 IST
ಚರಂಡಿಯನ್ನು ಸ್ವಚ್ಛ ಮಾಡುತ್ತಿರುವ ಸ್ಥಳೀಯರು
ಚರಂಡಿಯನ್ನು ಸ್ವಚ್ಛ ಮಾಡುತ್ತಿರುವ ಸ್ಥಳೀಯರು   

ಹನುಮಸಾಗರ: ‘ಸಮೀಪದ ಯರಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡದೂರಕಲ್ ಗ್ರಾಮದ ಜನರು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕಾಲೊನಿಯಲ್ಲಿನ ಚರಂಡಿಗಳು ವರ್ಷದಿಂದ ವರ್ಷಕ್ಕೆ ತಾಜ್ಯದಿಂದ ತುಂಬಿ ಹೋಗುತ್ತಿದ್ದರೂ, ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಇದೀಗ ಚರಂಡಿ ನೀರು ಮನೆಗಳಿಗೆ ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿಸಿದೆ.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಾಲೊನಿಯ ಚರಂಡಿ ಉಕ್ಕಿ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ದುರ್ವಾಸನೆಯು ಪರಿಸರ ಆವರಿಸಿಕೊಂಡಿದ್ದು, ಅಕ್ಕಪಕ್ಕದ ಮನೆಗಳಲ್ಲಿಯೂ ಅಸಹ್ಯ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳಾದ ನಾಗಪ್ಪ ಹೂಸಮನಿ, ಶಿವಪ್ಪ ಮಾದರ, ರೇವಪ್ಪ ಮಾದರ, ಯಮನೂರಪ್ಪ, ಕಾಳಪ್ಪ, ಶರಣಪ್ಪ, ಮಾರುತಿ, ದುರ್ಗೇಶ ಮುಂತಾದ ಯುವಕರು ಈ ಪರಿಸ್ಥಿತಿಯಿಂದ ಬೇಸತ್ತು ಚರಂಡಿಯ ತ್ಯಾಜ್ಯವನ್ನು ರಸ್ತೆಗೆ ಹಾಕಿ ಗ್ರಾಮ ಪಂಚಾಯಿತಿಯ ವಿರುದ್ಧ ಪ್ರತಿಭಟನೆ ನಡೆಸಿದರು.

‘ವರ್ಷದಿಂದ ವರ್ಷಕ್ಕೆ ಇದೇ ಸಮಸ್ಯೆ ಎದುರಾಗುತ್ತಿದೆಯಾದರೂ, ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಈ ಕಾಲೊನಿಯ ಸ್ಥಿತಿಗತಿಯನ್ನು ಪರಿಶೀಲಿಸುವ ಆಸಕ್ತಿ ತೋರಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ’ ಎಂದು ಆರೋಪಿಸಿದರು.

ADVERTISEMENT

ಚರಂಡಿಯಿಂದ ಹರಿಯುತ್ತಿರುವ ದುರ್ವಾಸನೆಯು ಮಕ್ಕಳಲ್ಲಿ ವಾಂತಿ, ಭೇದಿ ಸೇರಿದಂತೆ ವಿವಿಧ ಅನಾರೋಗ್ಯ ಉಂಟುಮಾಡಿದ್ದು, ಕೆಲವರು ಆಸ್ಪತ್ರೆ ಸೇರುವಂತಾಗಿದೆ. ‘ಮಕ್ಕಳ ಆರೋಗ್ಯ ಹಾಳಾದರೆ ಹೊಣೆ ಯಾರು? ಇದು ನೇರವಾಗಿ ಪಂಚಾಯಿತಿ ನಿರ್ಲಕ್ಷ್ಯದ ಪರಿಣಾಮ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಪ್ರಮುಖ ರಸ್ತೆಯೇ ಈಗ ಚರಂಡಿಯಾಗಿ ಮಾರ್ಪಟ್ಟಿದ್ದು, ಜನರಿಗೆ ಸಂಚಾರವೇ ಕಷ್ಟವಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಜನರ ಜೀವನಕ್ಕೆ ಪಾಡು ತಂದಿರುವ ಈ ಸಮಸ್ಯೆಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಚರಂಡಿಯಲ್ಲಿರುವ ತ್ಯಾಜ್ಯವನ್ನು ರಸ್ತೆಗೆ ಹಾಕಿ ಗ್ರಾಮ ಪಂಚಾಯಿತಿಯ ವಿರುದ್ಧ ಪ್ರತಿಭಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.