ADVERTISEMENT

ಕುಷ್ಟಗಿ: ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಕೆಪಿಎಸ್‌ ಶಾಲೆ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ; ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:34 IST
Last Updated 18 ನವೆಂಬರ್ 2025, 7:34 IST
ಕುಷ್ಟಗಿಯಲ್ಲಿ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು
ಕುಷ್ಟಗಿಯಲ್ಲಿ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಉನ್ನತೀಕರಿಸಿ ವಿಲೀನಗೊಳಿಸುವ ಮೂಲಕ ಸರ್ಕಾರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂಬುದನ್ನು ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿ ನಂತರ ಕಚೇರಿ ಬಳಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ,'ರಾಜ್ಯದಲ್ಲಿ ಸದ್ಯ 47,493 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಳು ಮತ್ತು 309 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಿದೆ’ ಎಂದರು.

ADVERTISEMENT

‘ದಾಖಲಾತಿ ಕೊರತೆಯ ನೆಪದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಹೊರತು ದಾಖಲಾತಿ ಕೊರತೆಗೆ ಇರುವ ಕಾರಣಗಳ ಅಧ್ಯಯನ ನಡೆಸಲು ಮುಂದಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ, ಶಿಕ್ಷಕರು ಇಲ್ಲದಿರುವುದು, ಅತಿಥಿ ಶಿಕ್ಷಕರ ಮೇಲೆಯೇ ಶಾಲೆಗಳು ಕಾಟಾಚಾರಕ್ಕೆ ನಡೆದಿರುವುದನ್ನು ಸರ್ಕಾರ ಮರೆಮಾಚುತ್ತಿದೆ. ಈ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದು ಸಾಮಾನ್ಯ ಸಂಗತಿ’ ಎಂದರು.

ಎಸ್‌ಎಫ್‌ಐ ತಾಲ್ಲೂಕು ಮುಖಂಡ ರಮೇಶ ಅಗಸಿಮುಂದಿನ ಇತರರು ಮಾತನಾಡಿದರು. ಹನುಮೇಶ ಚಳ್ಳಾರಿ, ವಿನಾಯಕ, ಅಮರೇಶ, ಕೆಂಚಪ್ಪ, ಗಂಗಾಧರ ಹಾಗೂ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.