ಕನಕಗಿರಿ: ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿದಂತೆ ವಿವಿಧ ತಾಲ್ಲೂಕು ಕಚೇರಿಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಇಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ತಾಲ್ಲೂಕು ಕೇಂದ್ರವಾಗಿ 8 ವರ್ಷ ಉರುಳಿದರೂ ಬಿಇಒ ಸೇರಿದಂತೆ ವಿದ್ಯಾರ್ಥಿಗಳಿಗೆ, ಜನರಿಗೆ ಉಪಯೋಗವಾಗುವ ಕಚೇರಿಗಳು ಆರಂಭಗೊಂಡಿಲ್ಲ. ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯ ದೊಡ್ಡಬಸವರಾಜ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಈಚನಾಳ ತಿಳಿಸಿದರು.
ಬಸ್ ಘಟಕ ಮಂಜೂರು ಮಾಡದ ಹಿನ್ನಲೆಯಲ್ಲಿ ಗ್ರಾಮೀಣ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಓಡಾಡುತ್ತಿಲ್ಲ, ಬಸ್ ಕೆಟ್ಟು ನಿಂತರೆ ಬೇರೆ ಬಸ್ ಬರುತ್ತಿಲ್ಲ. ವಿದ್ಯಾರ್ಥಿಗಳು ನಡೆದುಕೊಂಡು ಶಾಲೆ- ಕಾಲೇಜಿಗೆ ಹೋಗಬೇಕಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಸಾರಿಗೆ ಇಲಾಖೆಯವರು ಕನಕಗಿರಿಯಲ್ಲಿ ಬಸ್ ಘಟಕ ಇಲ್ಲದ ಪರಿಣಾಮ ಪರ್ಯಾಯ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದರು.
ಶಾಲಾ- ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು, ಶಿಕ್ಷಕರನ್ನು ನೇಮಿಸಬೇಕು, ಬಿಸಿಎಂ ವಸತಿ ನಿಲಯಕ್ಕೆ ಹಳೆಯ ಮೆನೋ ಚಾರ್ಟ್ ನೀಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ಹನುಮೇಶ, ವಿವಿಧ ಪದಾಧಿಕಾರಿಗಳಾದ ಬಾಲಾಜಿ ಚಳ್ಳಾರಿ, ರಮೇಶ, ಶಿವಕುಮಾರ, ಮಾರುತಿ, ಮೌನೇಶ, ದರ್ಶನ, ಮೌನೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.