
ಅಳವಂಡಿ: ‘ಭಗವಂತನು ಸೃಷ್ಟಿಸಿದ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಆದ್ದರಿಂದ ಎಲ್ಲದರಲ್ಲೂ ಪರಮಾತ್ಮನನ್ನು ಕಾಣಬೇಕು’ ಎಂದು ಕಲಬುರಗಿ ಪಿಎಸ್ಐ ಶರಣೆ ಯಶೋಧಾ ಕಟಕೆ ಹೇಳಿದರು.
ಸಮೀಪದ ಕಾತರಕಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಭಗವಂತನು ಎಲ್ಲಾ ಆಯಾಮಗಳಲ್ಲಿ ಉತ್ತಮರ ಜೊತೆಗೆ ನಿಲ್ಲುತ್ತಾನೆ. ಮನುಷ್ಯ ಸದಾ ಒಳ್ಳೆಯದನ್ನು ಮಾಡಬೇಕು. ತಂದೆ–ತಾಯಿಯರನ್ನು ಭಗವಂತನ ರೂಪದಲ್ಲಿ ನೋಡಬೇಕು. ಹೆಣ್ಣು ಜಗದ ಕಣ್ಣು ಆಕೆಯ ಶಕ್ತಿ ಅಗಾಧವಾದದು, ಆದರೆ ಸಂಸ್ಕಾರಯುತವಾಗಿ ಬದುಕುವದನ್ನು ಕಲಿಸುವುದು ಸಹ ಮುಖ್ಯ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ‘ಮಹಿಳಾ ಗೋಷ್ಠಿ ಮೂಲಕ ಮಹಿಳೆಯರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದು ಸಂತೋಷದ ಸಂಗತಿ. ಮಹಿಳೆ ಇಂದು ಅತ್ಯಂತ ಸ್ವಾವಲಂಬನೆಯಾಗಿ ಬದುಕುತ್ತಿದ್ದಾಳೆ. ಅದಕ್ಕೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಸಹ ಅದಕ್ಕೆ ಪೂರಕವಾಗಿವೆ ಎಂದರು.
ಕೊಪ್ಪಳದ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ ರಾಜಯೋಗಿನಿ ಯೋಗಿನ ಮಾತನಾಡಿ, ‘ಆತ್ಮಕ್ಕೆ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಬೇಕು. ಮನುಷ್ಯ ಎಲ್ಲಿವರೆಗೆ ತನ್ನನ್ನು ತಾನು ಅರಿತುಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ ಎಂದರು.
ಗದುಗಿನ ಮಾಜಿ ಜಿಪಂ ಉಪಾಧ್ಯಕ್ಷೆ ಶೋಭಾ ಮೇಟಿ ಮಾತನಾಡಿ, ‘ಮಕ್ಕಳು ನಮ್ಮನ್ನು ಅವರ ಶಿಕ್ಷಕರನ್ನು ನೆರೆಹೊರೆಯವರನ್ನು ನೋಡಿ ಕಲಿಯುತ್ತಾರೆ ಹೊರತು ಯಾವುದೋ ಕಥೆ, ಚಿತ್ರ ನೋಡಿ ಅಲ್ಲ. ನಮ್ಮ ಪೀಳಿಗೆ ಚನ್ನಾಗಿ ಸುಸಂಸ್ಕೃತ, ಸಂಸ್ಕಾರವಂತರಾಗಿ ಇರಬೇಕು ಅಂದರೆ ನಾವು ಹಾಗೆ ಇರಬೇಕು ಆದ್ದರಿಂದ ಎಲ್ಲಾ ತಾಯಂದಿರು ಹಾಗೆ ಇರಲು ಪ್ರಯತ್ನಿಸಬೇಕು ಎಂದರು.
ಸಾಹಿತಿ ವೀರಣ್ಣ ಹುರಕಡ್ಲಿ ಅವರ ಸಂಪಾದಕತ್ವದಲ್ಲಿ ಹೊರತಂದ ಕಾತರಕಿ ಗತ ವೈಭವ ಗ್ರಂಥ ಬಿಡುಗಡೆ ಗೊಳಿಸಲಾಯಿತು. ವನಜ ಗಂಗಾಧರ ಪುರೋಹಿತ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಮಾಜಿ ತಾಪಂ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಭೈರಣ್ಣನವರ, ಕೋಮುಲ ಕುದರಿಮೋತಿ, ಅನ್ನಪೂರ್ಣ ಮನ್ನಾಪುರ ಇದ್ದರು.
ಶಿವರಂಜನಿ ಹಿರೇಗೌಡ್ರ, ಮಹಾದೇವಿ ಭೈರಣ್ಣವರ ಅವರು ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.