ADVERTISEMENT

ಕೊಪ್ಪಳ | ಟಿಪ್ಪರ್‌ ಹರಿದು 100ಕ್ಕೂ ಹೆಚ್ಚು ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 17:02 IST
Last Updated 30 ಸೆಪ್ಟೆಂಬರ್ 2025, 17:02 IST
   

ಮುನಿರಾಬಾದ್‌: ಇಲ್ಲಿಗೆ ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಕಾರ್ಖಾನೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಟಿಪ್ಪರ್‌ ಹರಿದ ಪರಿಣಾಮ 100ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.  

ಬೇವಿನಹಳ್ಳಿ ಗ್ರಾಮದ ಚಿದಾನಂದಪ್ಪ ಮಲ್ಲಯ್ಯ ಮಡ್ಡಿ ಎಂಬವರಿಗೆ ಸೇರಿದ ಕುರಿಗಳ ಮೇಲೆ ವೇಗದಿಂದ ಬಂದ ಟಿಪ್ಪರ್ ನಿರ್ಲಕ್ಷ್ಯದಿಂದ ಸಾಗಿದ್ದರಿಂದ ಘಟನೆ ನಡೆದಿದ್ದು, ರಸ್ತೆ ತುಂಬೆಲ್ಲಾ ಕುರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಟಿಪ್ಪರ್‌ ವಾಹನದ ಸಂಖ್ಯೆ ತಿಳಿದು ಸ್ಥಳೀಯರು ವಿವರ ಪತ್ತೆ ಹಚ್ಚಿದ್ದಾರೆ.

ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಮಾಲೀಕನಿಗೆ ಸಾಂತ್ವಾನ ಹೇಳಿ ಸರ್ಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಿಕೊಡುವುದಾಗಿ ಹೇಳಿದರು. ಬೇವಿನಹಳ್ಳಿ ಗ್ರಾಮಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಬೇವಿನಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.

ADVERTISEMENT

ಸಂಜೆಯೇ ಘಟನೆ ನಡೆದರೂ ತಡರಾತ್ರಿಯ ತನಕ ಸತ್ತ ಕುರಿಗಳ ಲೆಕ್ಕ ಮಾಡುವ ಕೆಲಸದಲ್ಲಿ ಪೊಲೀಸರು ತೊಡಗಿದ್ದರು. ಪಶುವೈದ್ಯಾಧಿಕಾರಿಗಳು ಮತ್ತು ಕುರಿಗಾರರು ಲೆಕ್ಕ ಮಾಡಿದರು. ಈ ಘಟನೆಯಿಂದಾಗಿ ಒಂದು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.