ADVERTISEMENT

ಆ. 6ರಂದು ಕೊಪ್ಪಳಕ್ಕೆ ಸಿದ್ದರಾಮಯ್ಯ: ಕೇಸರಿ ತೋರಣ ತೆಗೆಯಲು ‌ಒತ್ತಾಯ; ಜಟಾಪಟಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 16:04 IST
Last Updated 4 ಅಕ್ಟೋಬರ್ 2025, 16:04 IST
   

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅ. 6 (ಸೋಮವಾರ) ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಇಲ್ಲಿನ ಭಾಗ್ಯನಗರದ ತುಳಜಾ ಭವಾನಿ ದೇವಸ್ಥಾನದ ಮಂಭಾಗದಲ್ಲಿ ಕಟ್ಟಲಾಗಿದ್ದ ಕೇಸರಿಯ ತೋರಣ ತೆಗೆಯುವಂತೆ ಪೊಲೀಸರು ಒತ್ತಡ ಹೇರಿದ್ದರಿಂದ ಶನಿವಾರ ರಾತ್ರಿ ಬಿಗುವಿನ ವಾತಾವರಣ ‌ನಿರ್ಮಾಣವಾಗಿತ್ತು.

ಶರನ್ನವರಾತ್ರಿ ಅಂಗವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ತುಳಜಾ ಭವಾನಿ ದೇವಸ್ಥಾನದ ಮುಂಭಾಗದಲ್ಲಿ ಕೇಸರಿ ಬಣ್ಣದ ತೋರಣವನ್ನು ಸಾಲುಸಾಲಾಗಿ ಕಟ್ಟಿದ್ದರು. ಇದೇ ದೇವಸ್ಥಾನದ ಸಮೀಪದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಅನ್ನು ಮುಖ್ಯಮಂತ್ರಿ ಉದ್ಘಾಟನೆ ನೆರವೇರಿಸುವರು. ಆದ್ದರಿಂದ ತೋರಣ ತೆರವು ಮಾಡಲು ಎಸ್.ಎಸ್.ಕೆ. ಸಮಾಜದ ಮುಖಂಡರಿಗೆ ಪೊಲೀಸರಿಗೆ ಸೂಚಿಸಿದರು.

ವಿಷಯ ತಿಳಿಯುದ್ದಂತೆಯೇ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮುಖಂಡ ಪ್ರಾಣೇಶ ಮಾದಿನೂರು, ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಜವಾಹರಲಾಲ್ ಸಾ ಅಂಟಾಳಮರದ ಸೇರಿದಂತೆ ನೂರಾರು ಜನ ಜಮಾಯಿಸಿ‌ ಪೊಲೀಸರ ನಡೆ ಖಂಡಿಸಿ ಪ್ರತಿಭಟನೆ ನಡೆಸಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.

ADVERTISEMENT

ಯಾವುದೇ ರಾಜಕೀಯ ಕಾರಣಕ್ಕಾಗಿ ಕೇಸರಿ ತೋರಣ ಕಟ್ಟಿಲ್ಲ. ಶರನ್ನವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕಟ್ಟಲಾಗಿದೆ. ಇದಕ್ಕಾಗಿ ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದುಕೊಳ್ಳಲಾಗಿದೆ. ಆದರೂ ಪೊಲೀಸರು ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ತೆರವು ಮಾಡಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ತೋರಣ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಕೆಲ ಹೊತ್ತಿನ ಬಳಿಕ ಪೊಲೀಸರು ಮಣಿದರು.

ತೋರಣ ತೆರವು ಮಾಡುವುದು ಬೇಕಿಲ್ಲ, ಇದಕ್ಕಾಗಿ ನಿಮ್ಮ ಮೇಲೆ ಒತ್ತಡ ಹೇರುವುದಿಲ್ಲ ಎಂದು ಕೊಪ್ಪಳ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಜಯಪ್ರಕಾಶ ಹೇಳಿದ ಬಳಿಕ ಜಮಾಯಿಸಿದ್ದ ಜನ ಜೈಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಪಟ್ಟರು. ಬಳಿಕ ಪರಿಸ್ಥಿತಿ ತಿಳಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.