
ಕೊಪ್ಪಳ: ಗುರುವಾರ ಬೆಳಗಿನ ಜಾವ ನಿಧನರಾದ ದೇವದುರ್ಗ ತಾಲ್ಲೂಕಿನ ಕನಕ ಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾಮಠದ ಪೀಠಾಧಿಪತಿ ಸಿದ್ದರಾಮಾನಂದಪುರಿ ಸ್ವಾಮೀಜಿ ಅವರಿಗೂ ಕೊಪ್ಪಳ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಶ್ರಾವಣ ಯಾತ್ರೆ, ಧರ್ಮ ಪ್ರಚಾರ ಯಾತ್ರೆ, ಸಾಮೂಹಿಕ ವಿವಾಹ ಹೀಗೆ ಹಲವು ಕಾರ್ಯಗಳ ಮೂಲಕ ಸ್ವಾಮೀಜಿ ಜನಮಾನಸದಲ್ಲಿ ಜೀವಂತವಾಗಿದ್ದಾರೆ.
ಸ್ವಾಮೀಜಿ ಕಲ್ಯಾಣ ಕರ್ನಾಟಕ ಭಾಗದ ಸಮುದಾಯದ ಏಳಿಗೆ ಶ್ರಮಿಸಿದ್ದರು. ಕಳೆದ 15 ವರ್ಷಗಳಿಂದ ಈ ಭಾಗದ ಸಾಮಾಜಿಕ, ಧಾರ್ಮಿಕ ಪ್ರಗತಿಯ ತೇರನ್ನೆಳೆಯುವ ಪ್ರಯತ್ನ ನಡೆಸಿ ಅಪಾರ ಭಕ್ತರ ಮನ್ನಣೆ ಗಳಿಸಿದ್ದರು.
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾಮಠದಲ್ಲಿ 2013ರಿಂದ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದರು.
ಪ್ರತಿವರ್ಷ ಶಿವರಾತ್ರಿಯ ಪಾಡ್ಯದ ದಿನ ಸಾಮೂಹಿಕ ವಿವಾಹ ಕಾರ್ಯ ಮಾಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಸಮುದಾಯಕ್ಕೆ ಸಂದೇಶ ರವಾನಿಸಿದ್ದರು. ತಾಲ್ಲೂಕಿನ ಬೇವಿನಹಳ್ಳಿಯಲ್ಲಿ 2022ರಲ್ಲಿ ನಡೆದ ಧರ್ಮ ಪ್ರಚಾರ ಯಾತ್ರೆ ಐತಿಹಾಸಿಕ ಕಾರ್ಯಕ್ರಮ ಎನ್ನಬಹುದು. ಗ್ರಾಮೀಣ ಜನರಲ್ಲಿ ಧರ್ಮಜಾಗೃತಿಯಾಗಬೇಕು ಎಂಬ ಭಾವನೆಯೊಂದಿಗೆ ಈ ಯಾತ್ರೆ ಆರಂಭಿಸಿದ್ದು ವಿಶೇಷ.
ಸ್ವಾಮೀಜಿ ಜಿಲ್ಲೆಯಲ್ಲಿ ಪ್ರತಿವರ್ಷ ಧರ್ಮ ಪ್ರಸಾರಕ್ಕಾಗಿ ಪ್ರವಾಸ ಕೈಗೊಳ್ಳುತ್ತಿದ್ದರು. ಶ್ರಾವಣ ಮಾಸದಲ್ಲಿ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಶ್ರಾವಣ ಯಾತ್ರೆ ಮಾಡಿದ್ದರು. ಈ ಯಾತ್ರೆ ಸಂದರ್ಭದಲ್ಲಿ ಸಮುದಾಯದ ಯುವಕರು ಧರ್ಮ, ದೇವರು, ಪೂಜೆ, ಪುನಸ್ಕಾರದಲ್ಲಿ ಹೆಚ್ಚು ಆಸಕ್ತಿವಹಿಸಬೇಕು. ಗುರು, ಹಿರಿಯರನ್ನು ಗೌರವಿಸಬೇಕು ದುಶ್ಚಟಮುಕ್ತ ಬದುಕು ಸಾಗಿಸಬೇಕು ಎಂದು ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದರು ಎಂದು ಸಮುದಾದಯ ಜನ ನೆನಪಿಸಿಕೊಳ್ಳುತ್ತಾರೆ.
ಅನಾರೋಗ್ಯದ ಕಾರಣದಿಂದ ಪ್ರವಾಸ ಕೈಗೊಳ್ಳದಂತೆ ವೈದ್ಯರು ಸಲಹೆ ನೀಡಿದ್ದರೂ ಆರೋಗ್ಯವನ್ನೂ ಲೆಕ್ಕಿಸದೆ ಕೊಪ್ಪಳ ಜಿಲ್ಲೆಗೆ ನಿರಂತರ ಪ್ರವಾಸ ಕೈಗೊಳ್ಳುವ ಮೂಲಕ ಸಮುದಾಯದ ಪ್ರಗತಿಯ ತೇರನ್ನೆಳೆಯುವ ಕಾರ್ಯವನ್ನು ಅವರು ಮಾಡಿದ್ದಾರೆ ಎಂದು ಸಮುದಾಯದ ಮುಖಂಡರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.