
ಗಂಗಾವತಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಕೆವಿಕೆ, ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ರೈತಗೀತೆ ಹಾಡುವ ಮೂಲಕ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ,‘ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು, ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯಲು ಸೂಕ್ತ ಎಂಬುದನ್ನು ಮಣ್ಣಿನ ಪರೀಕ್ಷೆ ಮೂಲಕ ತಿಳಿದು, ಕೃಷಿ ಅಧಿಕಾರಿಗಳ ಸಲ ಹೆ–ಸೂಚನೆಯಂತೆ ಬೆಳೆ ಬೆಳೆದು, ಉತ್ತಮ ಆದಾಯದ ಜೊತೆಗೆ ಉಜ್ವಲ ಜೀವನ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಪ್ಪ ಗೂಳರೆಡ್ಡಿ ಮೂಲಿಮನಿ ಮಾತನಾಡಿ,‘ಮುಂಗಾರಿನ ಆರಂಭದಲ್ಲಿ ಮಳೆ ಕೊರತೆಯಾಗಿ, ಕಟಾವಿನ ವೇಳೆ ಮಳೆಯ ಅವಾಂತರದಿಂದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ ರೈತರು ತುಂಬ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಯಾವ ಪರಿಹಾರವೂ ನೀಡಲಿಲ್ಲ. ಬೆಳೆಗೆ ಸೂಕ್ತ ಬೆಲೆ ಸಿಕ್ಕರೆ ರೈತರ ಬದುಕು ಹಸನಾಗಲಿದೆ’ ಎಂದರು.
ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಮಾತನಾಡಿ,‘ಬೇರೆ ದೇಶಗಳಿಗಿಂತ ಭಾರತದಲ್ಲಿ ಮಣ್ಣು, ನೀರು ಹಾಗೂ ನಿಸರ್ಗ ಉತ್ತಮವಾಗಿರಲಿದ್ದು, ಎರಡು ಹಂಗಾಮಿನಲ್ಲಿ ಬೆಳೆ ಬೆಳೆಯಬಹುದು. ನಮ್ಮಲ್ಲಿ ಶೇಖರಣಾ ಸವಲತ್ತು ಕಡಿಮೆ ಇರುವ ಕಾರಣ, ಬೆಳೆಗಳಿಗೆ ಕಡಿಮೆ ಬೆಲೆ ಇದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ರೈತರು ಸಮಗ್ರ ಕೃಷಿ ಪದ್ಧತಿ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭಗಳಿಸಬಹುದು’ ಎಂದು ಹೇಳಿದರು.
ಕೆವಿಕೆ ಮುಖ್ಯಸ್ಥ ರಾಘವೇಂದ್ರ ಎಲಿಗಾರ ಮಾತನಾಡಿ,‘ರೈತ ಪರ ನೀತಿಗಳನ್ನು ಜಾರಿಗೊಳಿಸಿದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಸ್ಮರಣಾರ್ಥ ಡಿ.23ರಂದು ರಾಷ್ಟ್ರೀಯ ರೈತರ ದಿನ ಆಚರಿಸಲಾಗುತ್ತಿದೆ. ಆಹಾರ ಒದಗಿಸುವ ರೈತರಿಗೆ ಎಲ್ಲರೂ ಕೃತಜ್ಞರಾಗಿರಬೇಕು’ ಎಂದರು.
ರೈತ ಮಹಿಳೆಯರಾದ ಶೇಖಮ್ಮ ವಾಣಿ ಕಲ್ಲತಾವರಗೇರಾ, ತಾವರಗೇರಾ ಮಹಾಂತಮ್ಮ ಪಾಟೀಲ, ಶಿರಗುಂಪಿ ನಿಂಗಮ್ಮ ಚಲವಾದಿ, ಕಾಮನೂರು ಶಿವಮ್ಮ, ಹೊಸಕೇರಾ ರಾಧಾ, ಆಗೋಲಿ ಶಂಕ್ರಮ್ಮ ಕಲ್ಮಂಗಿ, ಕನಕಗಿರಿ ಹನುಮಮ್ಮ ಭೋವಿ ಅವರನ್ನ ಸನ್ಮಾನಿಸಲಾಯಿತು.
ಕೃಷಿಕ ಸಮಾಜದ ಅಧ್ಯಕ್ಷ ಚೆನ್ನಪ್ಪ ಮಳಗಿ, ಪಂಪನಗೌಡ, ಶರಣಪ್ಪ ಹುಡೇಜಾಲಿ, ಕನಕಪ್ಪ ಮಳಗಾವಿ, ಜಿ.ಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಅಭಿಲಾಷ.ಜೆ, ಸಹಾಯಕ ಕೃಷಿ ನಿರ್ದೇಶಕ, ಮಹಾಂತ ಶಿವಯೋಗಯ್ಯ, ಮಹೇಶ ಕುರಹಟ್ಟಿ ಸೇರಿ ಕೆವಿಕೆ, ಕೃಷಿ ಇಲಾಖೆ, ಆತ್ಮ ಯೋಜನೆ ಸಿಬ್ಬಂದಿ ಸೇರಿ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.