ಕೊಪ್ಪಳ: ‘ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಬೇಕು. ಹಬ್ಬಗಳ ವೇಳೆ ಅಹಿತಕರ ಘಟನೆ ನಡೆದರೆ ಸಂಘಟಕರನ್ನೇ ಹೊಣೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಸೂಚನೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರ ಜೊತೆ ಬುಧವಾರ ಶಾಂತಿಸಭೆ ನಡೆಸಿದ ಅವರು,‘ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಒಂಬತ್ತನೇ ದಿನದಂದೇ (ಸೆ.4) ಈದ್ ಮಿಲಾದ್ ಇದ್ದು, ಅಂದು ಮೆರವಣಿಗೆಗೆ ಅವಕಾಶವಿಲ್ಲ. ಗಣೇಶ ಪ್ರತಿಷ್ಠಾಪಿಸುವ ಸಂಘಟಕರು ವಿಸರ್ಜನೆಯ ಸಮಯದಲ್ಲಿ ಮಾರ್ಗ ಮಧ್ಯದಲ್ಲಿಯೇ ನಿಲ್ಲಿಸಿ ಹೋದರೆ ಉಳಿದವರಿಗೂ ತೊಂದರೆಯಾಗುತ್ತದೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು’ ಎಂದರು.
‘ಸಂಘಟಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತದೆ. ಕಳೆದ ವರ್ಷ ಗಲಾಟೆಯಾದ ಕಾರಣಕ್ಕೆ ಒಂದು ಸಂಘಟನೆಗೆ ಗಣಪತಿ ಕೂಡಿಸಲು ಅನುಮತಿ ಕೊಡಬೇಡಿ ಎಂದು ತಹಶೀಲ್ದಾರ್‌ಗೆ ಪತ್ರ ಬರೆದಿದ್ದೇವೆ’ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಸುರೇಶ ಬಬಲಾದಿ, ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಸೈಬರ್ ಕ್ರೈಂ ಡಿವೈಎಸ್‌ಪಿ ಯಶವಂತ ಕುಮಾರ್, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಯೂನಸ್, ನಗರ ಪೊಲೀಸ್ ಠಾಣೆ ಪಿಐ ಜಯಪ್ರಕಾಶ್ ಮತ್ತು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಂ.ಕೆ.ಸವಣೂರ್ ಪಾಲ್ಗೊಂಡಿದ್ದರು.
ನಾವು ಅಧಿಕಾರಿಗಳು ಇಂದು ಈ ಊರು ಇನ್ನೊಂದು ದಿನ ಬೇರೊಂದು ಊರಿನಲ್ಲಿ ಇರುತ್ತೇವೆ. ಊರಿನ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವುದು ಜನರ ಮೇಲಿದೆ. ನಮಗೆ ನಿಮ್ಮೆಲ್ಲರ ಸಹಕಾರ ಅಗತ್ಯಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.