ADVERTISEMENT

ಕೊಪ್ಪಳ| ಅಧ್ಯಾತ್ಮವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆಯಂತೆ: ಮೋಹನ್‌ ಮೇಟಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:48 IST
Last Updated 9 ನವೆಂಬರ್ 2025, 6:48 IST
ಕೊಪ್ಪಳದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು
ಕೊಪ್ಪಳದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು   

ಕೊಪ್ಪಳ: ‘ಸಂಸ್ಕಾರದ ಬೇರು ಆಧ್ಯಾತ್ಮವಾಗಿದ್ದು, ಮಕ್ಕಳಲ್ಲಿ ಆಧ್ಯಾತ್ಮದತ್ತ ಒಲವು ಬೆಳೆಯುವಂತೆ ಮಾಡಬೇಕು. ಇಲ್ಲವಾದಲ್ಲಿ ಆಧ್ಯಾತ್ಮವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆಯಂತಾಗುತ್ತದೆ’ ಎಂದು ವಿಜಯಪುರದ ಸಾಹಿತಿ ಮೋಹನ್‌ ಮೇಟಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶಿಕ್ಷಣವನ್ನೇನೋ ಶಿಕ್ಷಣ ಸಂಸ್ಥೆಗಳು ನೀಡುತ್ತವೆ. ಆದರೆ ಸಂಸ್ಕಾರವನ್ನು ಯಾವ ಸಂಸ್ಥೆಗಳೂ ಕೊಡುವುದಿಲ್ಲ. ಸಂಸ್ಕಾರ ನಮ್ಮೊಂದಿಗೆ ಶಾಶ್ವತವಾಗಿ ನೆಲೆಸುತ್ತದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಕೇವಲ ದುಡ್ಡು ಗಳಿಕೆ ಹಿಂದೆ ಬಿದ್ದಿದ್ದೇವೆ’ ಎಂದರು.

ADVERTISEMENT

‘ಕನಕದಾಸರ ಆದರ್ಶಗಳನ್ನು ನಾವು ಮೊದಲು ಜೀವನದಲ್ಲಿ ಅಳವಡಿಸಿಕೊಂಡು, ಆ ಮೂಲಕ ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕು’ ಎಂದರು.

‘ಕನಕದಾಸರ ಹಾಡಿಕೊಂಡು ಹೋದದ್ದೆಲ್ಲ ಕೀರ್ತನೆಗಳಾಗಿವೆ. ಹಾಗಾಗಿ ಎರಡನೇ ವಿಕ್ರಮಾಂಕ ತಮ್ಮ ಶಾಸನಗಳಲ್ಲಿ ಕನಕರ ವರ್ಣನೆ ಮಾಡಿದ್ದಾರೆ. ಶ್ರೀಕೃಷ್ಣನ ಪರಮಭಕ್ತ ಕನಕದಾಸರನ್ನು ಕೊಟ್ಟಿದ್ದು ಮತ್ತು ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ಕೊಟ್ಟಿದ್ದು ಹಾಲುಮತ ಸಮಾಜದ ಸುದೈವ’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ್‌ ಮಾತನಾಡಿ, ‘ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಕಟ್ಟುವ ಮೂಲಕ ಸಮಾನತೆ ಸಾರಿದ್ದರು. ಸಚಿವ ಸಂಪುಟದಲ್ಲಿ ಎಲ್ಲ ಜಾತಿಗಳಿಗೂ ಪ್ರಾಧಾನ್ಯತೆ ನೀಡುವ ಮೂಲಕ ಅದೇ ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಗುತ್ತಿದ್ದಾರೆ ಎಂದರು.

ಸಂಸದ ಕೆ.ರಾಜಶೇಖರ ಹಿಟ್ನಾಳ್‌, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ್‌, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ನೇಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ತಹಶೀಲ್ದಾರ್‌ ವಿಠ್ಠಲ ಚೌಗಲಾ, ಮಾಜಿ ಶಾಸಕ ಬಸವರಾಜ ಹಿಟ್ನಾಳ್‌, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್‌ ಪಟೇಲ್, ಮುಖಂಡ ಗೂಳಪ್ಪ ಹಲಗೇರಿ, ರಾಮಣ್ಣ ಚೌಡ್ಕಿ, ಜಡಿಯಪ್ಪ ಬಂಗಾಳಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕನಕದಾಸ ವೃತ್ತದಿಂದ ಸಾಹಿತ್ಯ ಭವನದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮೋಜಿನ ಗೊಂಬೆಗಳು ಕಂಗೊಳಿಸಿದವು.

ಭಕ್ತ ಕನಕದಾಸರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಹಿಂದುಳಿದವರು ಬರೆದ ಕೃತಿಗಳು ಇಂದು ಮೇಲ್ವರ್ಗದಲ್ಲಿವೆ. ಅದಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನವೇ ಸಾಕ್ಷಿ. ಇಂದು ನಮ್ಮ ಸಂವಿಧಾನ ಜಗತ್ತಿಗೇ ಮಾದರಿಯಾಗಿದೆ.
ಹೇಮಲತಾ ನಾಯಕ ವಿಧಾನ ಪರಿಷತ್‌ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.