ADVERTISEMENT

ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಿ; ಸಕಲ ಸಿದ್ಧತೆಗೆ ಡಿ.ಸಿ ಸೂಚನೆ

ಜಿಲ್ಲೆಯಲ್ಲಿ 19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 6:34 IST
Last Updated 14 ಜುಲೈ 2021, 6:34 IST
ವಿದ್ಯಾರ್ಥಿಗಳ ವಿವರ
ವಿದ್ಯಾರ್ಥಿಗಳ ವಿವರ   

ಕೊಪ್ಪಳ: ಕೋವಿಡ್ ಸೋಂಕು ಇರುವ ವಿದ್ಯಾರ್ಥಿ ವಾರ್ಷಿಕ ಪರೀಕ್ಷೆ ಬರೆಯಲು ಇಚ್ಛಿಸಿದರೆ ವಿದ್ಯಾರ್ಥಿಯ ಆರೋಗ್ಯ ಸುಸ್ಥಿತಿಯಲ್ಲಿದೆ ಎಂಬುವುದರ ಬಗ್ಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಪಾಲಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದು ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜುಲೈ-2021ರ ಕುರಿತ ಪೂರ್ವಭಾವಿ ಸಭೆ ಉದ್ದೇಶಿಸಿಮಾತನಾಡಿದರು.

ಕೋವಿಡ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಪರೀಕ್ಷೆ ಬರೆಸಿ, ಅವರ ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ಬಂಡಲ್ ಮಾಡಬೇಕು. ನೆಗಡಿ, ಕೆಮ್ಮು ಬಂದ ವಿದ್ಯಾರ್ಥಿಗಳಿಗೆ 2 ವಿಶೇಷ ಮೀಸಲು ಪರೀಕ್ಷಾ ಕೊಠಡಿ ಕಾಯ್ದಿರಿಸಲಾಗಿದ್ದು, ಮನೆಯಿಂದಲೇ ನೀರು ಹಾಗೂ ಆಹಾರದ ಡಬ್ಬಿ ತರಲು ಅವಕಾಶ ಕಲ್ಪಿಸಲಾಗಿದೆ ಎಂದರು.

ADVERTISEMENT

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿ ನೇಮಿಸಲಾಗಿದೆ. ತಾಲ್ಲೂಕಿಗೆ ಒಂದರಂತೆ ಕೋವಿಡ್ ಕೇರ್ ಪರೀಕ್ಷಾ ಕೇಂದ್ರ ಮೀಸಲಿರಿಸಲಾಗಿದೆ. ಕೋವಿಡ್ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಮೀಸಲು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಲು ತಾಲ್ಲೂಕಿಗೆ 1ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಾಲ್ಲೂಕು ಕೇಂದ್ರಕ್ಕೆ ಹೋಗದಂತೆ ಪರೀಕ್ಷಾ ಕೇಂದ್ರ ರಚಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವಿದ್ಯಾರ್ಥಿಯ ನಡುವೆ ಕನಿಷ್ಠ 6 ಅಡಿ ಅಂತರವಿರಿಸಲಾಗಿದೆ. ಯಾವುದೇ ವಿದ್ಯಾರ್ಥಿ ಈ ಪರೀಕ್ಷೆಗೆ ಗೈರು ಹಾಜರಾದಲ್ಲಿ, ಪೂರಕ ಪರೀಕ್ಷೆಯನ್ನು ಪ್ರಥಮ ಅವಕಾಶವೆಂದು ಪರಿಗಣಿಸಲಾಗುವುದು. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಎಲ್ಲಅಧಿಕಾರಿ, ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯ ಹಾಗೂ ಎನ್-95 ಮಾಸ್ಕ್, ಅವಶ್ಯವೆನಿಸಿದಲ್ಲಿ ಫೇಸ್ ಶೀಲ್ಡ್ ಒದಗಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಸಾಗಲು ವಿವಿಧ ಇಲಾಖೆಗಳ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್, ತಾಲ್ಲೂಕು ಶಿಕ್ಷಣಾಧಿಕಾರಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.