ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ: ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:39 IST
Last Updated 18 ಸೆಪ್ಟೆಂಬರ್ 2025, 5:39 IST
ಕನಕಗಿರಿಯ ರಂಭಾಪುರಿ ಕಲ್ಯಾಣ‌ ಮಂಟಪದಲ್ಲಿ ಬುಧವಾರ ನಡೆದ ಅಖಂಡ ಗಂಗಾವತಿ ತಾಲ್ಲೂಕು ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು
ಕನಕಗಿರಿಯ ರಂಭಾಪುರಿ ಕಲ್ಯಾಣ‌ ಮಂಟಪದಲ್ಲಿ ಬುಧವಾರ ನಡೆದ ಅಖಂಡ ಗಂಗಾವತಿ ತಾಲ್ಲೂಕು ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು   

ಕನಕಗಿರಿ: ‘ಕೊಪ್ಪಳ ಜಿಲ್ಲೆಯ ಎಸ್‌ಎಸ್‌ಎಲ್‌ಸಿ‌ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಜಿಲ್ಲಾಡಳಿತ,‌ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ‌ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಗಂಗಾವತಿ ಹಾಗೂ ವಿವಿಧ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ‌ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದರ ಜತೆ ಫಲಿತಾಂಶ ಹೆಚ್ಚಳಕ್ಕೆ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕು. ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡಿದರೆ ಅತಿ ಹೆಚ್ಚು ಸಂತೋಷ ಪಡುವವರು ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜತೆ ಜವಾಬ್ದಾರಿಗಳನ್ನು ನಿಭಾಯಿಸುವುದೂ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರ ಶಾಲಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದೆ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶೇ25ರಷ್ಟು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ವಹಿಸಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.‌ಎಸ್. ಚೇತನ ಮಾತನಾಡಿ, ‘ಸಂಘವು ಸದಾ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಎಚ್.‌ಬಿ., ಸಂಘದ ರಾಜ್ಯ ಉಪಾಧ್ಯಕ್ಷ ಮಾರುತೇಶ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲಕುಮಾರ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ‌ ನಾಯಕ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿಶ್ರೀನಿವಾಸ, ತಾಲ್ಲೂಕು ಅಧ್ಯಕ್ಷ ಹಜರತ್ ಹುಸೇನ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವಗೌಡ, ಗಂಗಾವತಿ ಅಧ್ಯಕ್ಷ ಹನುಮಂತಪ್ಪ ಆನೆಗೊಂದಿ,‌ಕಾರಟಗಿ ಅಧ್ಯಕ್ಷ ವಿಠ್ಠಲ‌ ಜೀರಗಾಳಿ, ಕಾರಟಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ, ಶಿಕ್ಷಣಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ ಹಾದಿಮನಿ, ಗಂಗಾವತಿ ಅಧ್ಯಕ್ಷ ಹುಸೇನಪ್ಪ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಕನಕಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾಗಪ್ಪ ಹೊಸಮನಿ ಇತರರು ಇದ್ದರು.

ಮಲ್ಲಿಕಾರ್ಜುನ ಶಿರಗೇರಿ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ಮಾಡಳ್ಳಿ ಹಾಗೂ ಪವಿತ್ರ ಮಂಜುನಾಥ ನಿರೂಪಿಸಿದರು. ಸಾಹಿತಿ ಪವನಕುಮಾರ ಗುಂಡೂರು ಉಪನ್ಯಾಸ ನೀಡಿದರು. ಉಮೇಶ‌ ಕಂದಕೂರು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.