
ಸಿ. ವಿ. ಚಂದ್ರಶೇಖರ್
ಕೊಪ್ಪಳ: ರಾಜ್ಯ ಸರ್ಕಾರ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ನೀಡಿದ ಮೊದಲನೇ ಕಂತಿನ ₹10 ಕೋಟಿ ವಾಪಸ್ ಪಡೆದಿರುವುದು ಅಕ್ಷಮ್ಯ. ಸರ್ಕಾರ ಹಣ ವಾಪಸ್ ಪಡೆದು ಈ ಭಾಗದ ರೈತರಿಗೆ ಅನ್ಯಾಯ ಮಾಡಿರುವ ವಿಷಯ ತಿಳಿದಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರು ಮೌನವಾಗಿರುವುದು ಜನತೆಗೆ ಮಾಡಿದ ಮಹಾ ಮೋಸ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ. ವಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರ ಕೊಟ್ಟ ಹಣ ವಾಪಸ್ ಪಡೆದಿರುವ ವಿಷಯ ಈಗ ಬಹಿರಂಗವಾಗಿದೆ. ಕ್ರೆಸ್ಟ್ ಗೇಟ್ ಸುರಕ್ಷತಾ ತಜ್ಞ ಕನ್ಹಯ್ಯ ನಾಯ್ಡು ಈ ಕಾಮಗಾರಿ ಪರಿಶೀಲಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ₹10 ಕೋಟಿ ಕೊಟ್ಟ ಹಣವನ್ನು ವಾಪಸ್ ಪಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದ ಈ ನಡೆ ಗುತ್ತಿಗೆದಾರರಿಗೆ ಸಮಸ್ಯೆ ಮಾಡಿದೆ. ಕೆಲಸ ಆಮೆ ಗತಿ ವೇಗದಲ್ಲಿ ಸಾಗುತ್ತಿದೆ. ಈಗ ನಡೆಯುತ್ತಿರುವ ಕೆಲಸದ ರೀತಿ ನೋಡಿದರೆ ಜೂನ್ ತಿಂಗಳ ಒಳಗಾಗಿ ಎಲ್ಲಾ 33 ಕ್ರೆಸ್ಟ್ ಗೇಟ್ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರ ತನ್ನ ಪಾಲಿನ ₹35 ಕೋಟಿ ರೂಪಾಯಿ ನೀಡಿರುವುದನ್ನು ಸಭೆಯಲ್ಲಿ ಉಲ್ಲೇಖಿಸಿದ್ದಾರೆ. ಕ್ರೆಸ್ಟ್ ಗೇಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಆಂಧ್ರಕ್ಕೆ ಇರುವ ಕಾಳಜಿ ಕರ್ನಾಟಕ ಸರ್ಕಾರಕ್ಕೆ ಇಲ್ಲದಿರುವುದು ದುರಂತ ಎಂದು ಹೇಳಿದ್ದಾರೆ.
ಈ ಪ್ರಕರಣ ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ತೋರಿಸುತ್ತದೆ. ಅವೈಜ್ಞಾನಿಕ ಯೋಜನೆಗಳಿಂದ ಆರ್ಥಿಕ ಅಶಿಸ್ತು ಮಿತಿ ಮೀರಿದೆ. ಸರ್ಕಾರಕ್ಕೆ ಕನಿಷ್ಠ ಸೌಲಭ್ಯ ಒದಗಿಸಲು ಹಣ ಇಲ್ಲದಾಗಿದೆ. ಕೊಪ್ಪಳದ ಕಾರ್ಖಾನೆಗಳ ವಿಷಯದಲ್ಲಿ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರು ಮೌನ ತಾಳಿದಂತೆಯೇ ತುಂಗಭದ್ರಾ ಅಣೆಕಟ್ಟೆಯ ವಿಷಯದಲ್ಲಿಯೂ ಮೌನಕ್ಕೆ ಶರಣಾಗಿದ್ದಾರೆ. ಈ ವಿಷಯ ಕುರಿತು ಶೀಘ್ರದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಈ ಭಾಗದ ನಮ್ಮ ಪಕ್ಷದ ಶಾಸಕರು, ಮಾಜಿ ಸಚಿವರು ಹಾಗೂ ರಾಜ್ಯ ಮುಖಂಡರು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.