
ಕಾರಟಗಿ: ‘ಪ್ರತಿಯೊಂದು ಪ್ರದೇಶವು ತನ್ನದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ, ಕಲೆ ಮತ್ತು ಉಡುಗೆ, ತೊಡುಗೆಗಳನ್ನು ಹೊಂದಿರುತ್ತದೆ. ಸಾಂಸ್ಕೃತಿಕ ಉತ್ಸವಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುತ್ತವೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳುವ ವೇದಿಕೆ ಇದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಮಂದಿರದ ಆವರಣದಲ್ಲಿ ಶನಿವಾರ ಆರಂಭಗೊಂಡ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಗುರಿ ಮುಟ್ಟಲು ಕೌಶಲ ಮತ್ತು ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆ, ಆಸಕ್ತಿ ಇರುತ್ತದೆ. ಶಿಕ್ಷಕರು ಬರಿ ಪಾಠ ಮಾಡಿದರೆ ಸಾಲದು, ವಿದ್ಯಾರ್ಥಿಗಳಲ್ಲಿರುವ ಆ ಪ್ರತಿಭೆಗೆ ಶಕ್ತಿ ತುಂಬಬೇಕು’ ಎಂದರು.
ಡಿಡಿಪಿಐ ಸೋಮಶೇಖರಗೌಡ ಮಾತನಾಡಿ, ‘ಪ್ರತಿ ಸ್ಪರ್ಧೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಗೆಲುವು ಮತ್ತು ಸೋಲು ವಿದ್ಯಾರ್ಥಿಗಳ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು. ಸ್ಪರ್ಧೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾಠವಾಗುವುದು’ ಎಂದರು.
ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು, ಅವರಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಲು ಕಾರ್ಯಕ್ರಮ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಮೆಟ್ಟಿಲಾಗುವುದು’ ಎಂದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಮಾತನಾಡಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ದೇವರಾಜ್ ಭಾವಿಕಟ್ಟಿ, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ತಾ.ಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸದಸ್ಯ ದೊಡ್ಡಬಸಪ್ಪ ಬೂದಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ, ಗಂಗಾವತಿ ತಾಲ್ಲೂಕಾಧ್ಯಕ್ಷ ಶಿವಶಂಕರ ಕಲ್ಮಠ, ಕನಕಗಿರಿ ತಾಲೂಕಾಧ್ಯಕ್ಷೆ ಶಂಶಾದ ಬೇಗಂ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು, ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ವಿಠ್ಠಲ್ ಜೀರಗಾಳಿ ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್, ಲಿಂಗಾರೆಡ್ಡಿ ಆಲೂರು, ಶ್ರೀನಿವಾಸ್ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಉತ್ಸವ ಏಕತೆ ಬಿಂಬಿಸುತ್ತವೆ ಗುರಿ ಮುಟ್ಟಲು ಕೌಶಲ ಮತ್ತು ಅಭ್ಯಾಸ ಅಗತ್ಯ ಸ್ಪರ್ಧೆಗಳು ವಿದ್ಯಾರ್ಥಿಗಳ ಜೀವನದ ಪಾಠಗಳು
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ವಿದ್ಯಾರ್ಥಿಗಳು ಅದರ ಸದೂಪಯೋಗ ಪಡೆದುಕೊಳ್ಳಬೇಕುಸೋಮಶೇಖರಗೌಡ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.