ADVERTISEMENT

ಪಪ್ಪಾಯಿ ರಸಕ್ಕೆ ಹೆಚ್ಚಿದ ಬೇಡಿಕೆ: ಮಾರಾಟವಾಗದ ಬೆಳೆಯಿಂದ ಲಾಭ

ಪಪ್ಪಾಯಿ ಬೆಳೆದು ಯಶ ಕಂಡ ರೈತ

ಸಿದ್ದನಗೌಡ ಪಾಟೀಲ
Published 25 ಆಗಸ್ಟ್ 2021, 5:30 IST
Last Updated 25 ಆಗಸ್ಟ್ 2021, 5:30 IST
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ರೈತ ಮಾರ್ಕಂಡೇಯ ಹಿರೇಮಠ ಪಪ್ಪಾಯಿ ಹಣ್ಣುಗಳಿಂದ ಹಾಲು ತೆಗೆದು ಪ್ಲಾಸ್ಟಿಕ್‌ ಹಾಳೆಯಲ್ಲಿ ಸಂಗ್ರಹಿಸಿ ಮೌಲ್ಯವರ್ಧನೆ ಮಾಡುತ್ತಿರುವುದು
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ರೈತ ಮಾರ್ಕಂಡೇಯ ಹಿರೇಮಠ ಪಪ್ಪಾಯಿ ಹಣ್ಣುಗಳಿಂದ ಹಾಲು ತೆಗೆದು ಪ್ಲಾಸ್ಟಿಕ್‌ ಹಾಳೆಯಲ್ಲಿ ಸಂಗ್ರಹಿಸಿ ಮೌಲ್ಯವರ್ಧನೆ ಮಾಡುತ್ತಿರುವುದು   

ಕೊಪ್ಪಳ: ತಾಲ್ಲೂಕಿನ ಹಾಲವರ್ತಿ ಗ್ರಾಮದ ರೈತರೊಬ್ಬರು ಪಪ್ಪಾಯಿ ಬೆಳೆದಿದ್ದಲ್ಲದೆ ಅವುಗಳ ಮೌಲ್ಯವರ್ಧನೆಯಲ್ಲಿ ಲಾಭ ಮಾಡಿಕೊಂಡು ಉಳಿದ ರೈತರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಮಾರ್ಕಂಡೇಯ ಹಿರೇಮಠ ಎಂಬ ಪ್ರಗತಿಪರ ಕೃಷಿಕರು 7 ಎಕರೆ ಜಮೀನು ಹೊಂದಿದ್ದು, ಪ್ರತಿ ವರ್ಷ ಕಬ್ಬು, ಬಾಳೆ ಬೆಳೆಯುವ ಮೂಲಕ ಲಾಭ ಕಂಡುಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮಾರಾಟಕ್ಕೆ ತೊಂದರೆಯಾದ ನಂತರ ಹೊಸದಾಗಿ ಪಪ್ಪಾಯಿ ಕೃಷಿಯತ್ತ ಚಿತ್ತ ಹರಿಸಿದ್ದು, ಎರಡು ವರ್ಷಕ್ಕೆ ಉತ್ತಮ ಫಲ ನೀಡುವ ಈ ಪಪ್ಪಾಯಿ ಈ ಸಾರಿ ರೈತನ ಕೈಹಿಡಿದಿದೆ.

ಮೌಲ್ಯವರ್ಧನೆ ಹೇಗೆ?: ಪ್ರಥಮ ಬಾರಿಗೆ ಪಪ್ಪಾಯ ಹಣ್ಣಿನಿಂದ ಪೆಪೆನ್ ಎನ್ನುವ ಲ್ಯಾಟಿಕ್ಸ್ (ಹಾಲು) ಕೊಯ್ಲು ಮಾಡಿ ಹೆಚ್ಚುವರಿ ಆದಾಯ ಪಡೆದಿರುವುದು ವಿಶೇಷ ಸಾಧನೆ. ಪಪ್ಪಾಯ ಎಲ್ಲ ಕಟಾವಾದ ನಂತರ ಕೊನೆಗೆ ಅಳಿದುಳಿದ ಹಣ್ಣುಗಳು ಮಾರಾಟವಾಗುವುದಿಲ್ಲ. ಹೀಗಾಗಿ ಅವುಗಳನ್ನು ಹಾಗೆಯೇ ಹೊಲದಲ್ಲಿ ಬಿಡುವುದರಿಂದ ನಷ್ಟದ ಜತೆಗೆ ಪರಿಸರವೂ ಹಾಳಾಗುತ್ತದೆ. ಇದನ್ನು ವಿಲೇವಾರಿ ಮಾಡುವುದು ದುಬಾರಿ ಸಂಗತಿ.

ADVERTISEMENT

ಇದನ್ನರಿತ ರೈತ ಮಾರ್ಕಂಡೇಯ ಮಹಾರಾಷ್ಟ್ರದ ಪಪ್ಪಾಯ ಬೆಳೆಗಾರರನ್ನು ಸಂಪರ್ಕಿಸಿ ಕೊನೆಯ ಹಂತದಲ್ಲಿ ಪಪ್ಪಾಯ ಹಣ್ಣುಗಳಿಂದ ಹಾಲು ಕೊಯ್ಲು ಮಾಡಿದಲ್ಲಿ ಹೆಚ್ಚುವರಿ ಲಾಭ ದೊಂದಿಗೆ ಪರಿಸರ ಸಂರಕ್ಷಣೆ ಆಗುವುದು ಎಂದು ತಿಳಿದುಕೊಂಡು, ಮಹಾ ರಾಷ್ಟ್ರದ ಶ್ರೀಗಣೇಶ ಪಾಟೀಲ ಅವರನ್ನು ಸಂಪರ್ಕಿಸಿ 28,000 ಗುತ್ತಿಗೆ ಆಧಾರದಲ್ಲಿ ಪೆಪನ್ ಕೊಯ್ಲು ಮಾಡುವುದರ ಮೂಲಕ ಪಪ್ಪಾಯ ಹೆಚ್ಚಿನ ಮೌಲ್ಯವರ್ಧನೆ ಕ್ರಮ ಕೈಗೊಂಡಿದ್ದಾರೆ.

‘ಈ ಮೊದಲುಬಾಳೆಯಲ್ಲಿ ಅಂತರ ಬೆಳೆಗಾಗಿ ವಿಶೇಷವಾಗಿ ಮೆಣಸಿನಕಾಯಿ ಬೆಳೆದು ₹1 ಲಕ್ಷಕ್ಕೂ ಹೆಚ್ಚಿನ ಆದಾಯ ಬಂದಿದೆ. 7 ಎಕರೆ ಜಮೀನಿನಲ್ಲಿ ಪಪ್ಪಾಯ ರೆಡ್ ಲೇಡಿ (ಥೈವಾನ್–786) ತಳಿ ಬೆಳೆದು, ಲಾಕ್‌ಡೌನ್ ಸಮಯದಲ್ಲಿ ಪಪ್ಪಾಯದಿಂದ ₹11 ಲಕ್ಷಕ್ಕೂ ಅಧಿಕ ಲಾಭ ಆಗಿದೆ’ ಎಂದು ರೈತ ಹಿರೇಮಠ ಹೇಳುತ್ತಾರೆ.

‘ನೀರು, ಪೋಷಕಾಂಶಗಳ ಮತ್ತು ಸಸ್ಯ ಸಂರಕ್ಷಣೆಕುರಿತು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದ ಅವರು ಸಮೃದ್ಧವಾಗಿ ಪಪ್ಪಾಯಿ ಬೆಳೆಸಿದ್ದಾರೆ. ಉಳಿದ ಹಣ್ಣುಗಳ ರಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಸಂಗ್ರಹಿಸಿ ಅದನ್ನು ಒಣಗಿಸಿ ಲ್ಯಾಟೆಕ್ಸ್ ಎಂಬ ಪುಡಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕೆ 100 ಗ್ರಾಂಗೆ ₹50ಕ್ಕೂ ಹೆಚ್ಚು ಬೆಲೆ ಇರುತ್ತದೆ. ಇದನ್ನು ಔಷಧ, ಐಸ್‌ಕ್ರೀಮ್, ಮಾಂಸ ಮೃದುಗೊಳಿಸಲು ಬಳಕೆ ಮಾಡಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ವಿಷಯ ತಜ್ಞ ವಾಮನಮೂರ್ತಿ.

ಕೊನೆಯ ಹಂತದ ಹಣ್ಣುಗಳನ್ನು ಪೋಲು ಮಾಡದೇ ಹಾಲು ತೆಗೆದು ಹೆಚ್ಚುವರಿ ಆದಾಯಪಡೆಯಬಹುದು ಎನ್ನುತ್ತಾರೆ ತಜ್ಞರು.

ಈ ಮಾದರಿ ಕೃಷಿ ಜಿಲ್ಲೆಯ ವಿವಿಧ ಪ್ರಗತಿಪರ ರೈತರ ಗಮನ ಸೆಳೆದಿದ್ದು, ಹೆಚ್ಚಿನ ಮಾಹಿತಿಗೆ ರೈತ ಮಾರ್ಕಂಡೇಯ ಹಿರೇಮಠ ಅವರನ್ನು ಸಂಪರ್ಕಿಸಬಹುದು.

ಮೊ- 96630-05085ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.