ADVERTISEMENT

ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಿ: ಕಾರ್ಯಾಗಾರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 7:14 IST
Last Updated 23 ಅಕ್ಟೋಬರ್ 2021, 7:14 IST
ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು. ಜಿ.ಪಂ ಸಿಇಒ ಫೌಜಿಯಾ ತರನ್ನುಮ್, ತಾ.ಪಂ. ಇಒ ಡಾ.ಮೋಹನ್ ಹಾಗೂ ಪ್ರಮುಖರು ಇದ್ದರು
ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು. ಜಿ.ಪಂ ಸಿಇಒ ಫೌಜಿಯಾ ತರನ್ನುಮ್, ತಾ.ಪಂ. ಇಒ ಡಾ.ಮೋಹನ್ ಹಾಗೂ ಪ್ರಮುಖರು ಇದ್ದರು   

ಗಂಗಾವತಿ: ಗಾಂಧೀಜಿ ಅವರು ಕಂಡಿರುವ ಗ್ರಾಮಗಳ ಅಭಿವೃದ್ಧಿಯ ಕನಸು ನನಸಾಗಿಸಲು ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲ್ಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಶುಕ್ರವಾರ ಗಂಗಾವತಿ ತಾಲ್ಲೂಕಿನ ಎಲ್ಲ ಗ್ರಾ.ಪಂ ಅಧ್ಯಕ್ಷರ, ಉಪಾಧ್ಯಕ್ಷರ, ಸದಸ್ಯರ ಮತ್ತು ಪಿಡಿಒ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳ ಜೊತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಕೂಡ ಸಂಯೋಜಿಸಿಕೊಂಡು ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಗ್ರಾಮದ ಅಭಿವೃದ್ಧಿಯಾಗಲಿದೆ ಎಂದರು.

ADVERTISEMENT

ನಂತರ ಜಿ.ಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ಸರ್ಕಾರದಿಂದ ಗ್ರಾ.ಪಂ ಗಳಿಗೆ ಸಾಕಷ್ಟು ಅನುದಾನ ಬರುತ್ತಿದೆ. ಅದನ್ನು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು. ನರೇಗಾ ಯೋಜನೆ ಬಳಸಿಕೊಂಡು ಸರ್ಕಾರ ಆಸ್ತಿಗಳನ್ನು ಶಾಶ್ವತವಾಗಿ ಕಾಪಾಡುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೊಸ ಕೆರೆ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುವಂತೆ ಸದಸ್ಯರಿಗೆ ಸೂಚಿಸಿದರು.

ಬಯಲು ಮುಕ್ತ ಶೌಚಾಲಯ ಗ್ರಾಮಗಳನ್ನಾಗಿಸಲು ಗ್ರಾ.ಪಂ ವತಿಯಿಂದ ಶೌಚಾಲಯಕ್ಕೆ ಅನುದಾನ ನೀಡಲಾಗಿದೆ. ಅದನ್ನು ಬಳಸಿ, ಶೌಚಾಲಯಗಳು ನಿರ್ಮಾಣವಾದರು, ಇದುವರೆಗೂ ಅವು ಬಳಕೆ‌ ಆಗುತ್ತಿಲ್ಲ. ಈ ಕುರಿತು ಎಲ್ಲ ಗ್ರಾ.ಪಂ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು

ಗ್ರಾಮೀಣ ಭಾಗದಲ್ಲಿ ಘನತಾಜ್ಯ ವಿಲೇವಾರಿ ಘಟಕಗಳ ಬಳಕೆ ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರಿಗೆ ಹಸಿ ಮತ್ತು ಒಣಕಸ ವಿಂಗಡಣೆ ಮಾಡುವ ವಿಧಾನ ತಿಳಿಸುವ ಜೊತೆಗೆ ಪ್ಲಾಸ್ಟಿಕ್ ನಿಷೇಧ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಂತರ ಸ್ವಚ್ಛ ಭಾರತ ಮಿಷನ್, ಜೆಜೆಎಂ, ಸಂಜೀವಿನಿ ಯೋಜನೆ ಹಾಗೂ ಪಂಚಾಯಿತಿ ರಾಜ್ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ತಾ.ಪಂ ಇಒ ಡಾ.ಡಿ.ಮೋಹನ್, ಕೊಪ್ಪಳ ತಾ.ಪಂ ಇಒ ಮಲ್ಲಿಕಾರ್ಜುನ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಲೆಪ್ಪ ದೇಸಾಯಿ, ಭೀಮಣ್ಣ ಹವಳೆ, ಸಿ.ಬಿ.ಪಲ್ಲೇದ್, ತಾ.ಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.