ADVERTISEMENT

ಮಾದಿಗ ದಂಡೋರಾ ಪ್ರತಿಭಟನೆ: ಮಫ್ತಿಯಲ್ಲಿದ್ದ ಪೊಲೀಸ್ ಎಳೆದಾಡಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 11:18 IST
Last Updated 17 ಸೆಪ್ಟೆಂಬರ್ 2021, 11:18 IST

ಕೊಪ್ಪಳ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಮಾದಿಗಾ ದಂಡೋರಾ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬರನ್ನು ಎಳೆದಾಡಿ ವಾಗ್ವಾದ ನಡೆಸಿದ ಘಟನೆ ನಡೆಯಿತು.

ನ್ಯಾ.ಸದಾಶಿವ ಆಯೋಗದ ವರದಿ ಹಾಗೂ ವರದಿ ಜಾರಿಗೆ ವಿರೋಧಿಸುತ್ತಿರುವ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ವಿರುದ್ದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲ್ಲೂಕು ಕ್ರೀಡಾಂಗಣದಿಂದ ಹೊರಟ ಜಾಥಾ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ಟಯರ್ ಬೆಂಕಿ ಹಚ್ಚುವ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ADVERTISEMENT

ಇದನ್ನು ತಡೆಯಲು ಮಫ್ತಿಯಲ್ಲಿ ಇದ್ದ ಪೊಲೀಸ್ ವೆಂಕಟೇಶ ಎಂಬುವರು ಬಂದಾಗ ಎಳೆದಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ದಂಡೋರಾ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹೋರಾಟಗಾರರನ್ನು ಸಮಾಧಾನಪಡಿಸಿ ಜಾಥಾ ಮುಂದೆ ತೆರಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.