ತಾವರಗೇರಾ: ಭರ್ತಿಯಾಗಿರುವ ರಾಯನಕೆರೆಯ ತಡೆಗೋಡೆ ಮತ್ತು ಗೇಟ್‌ವಾಲ್ ಮೂಲಕ ಅಪಾರ ಪ್ರಮಾಣದ ನೀರು ಹರಿದು ಪೋಲಾಗುತ್ತಿದ್ದು, ಸಾರ್ವಜನಿಕರ ಆಗ್ರಹದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಬಳಿಕ ತುರ್ತು ದುರಸ್ತಿ ಕಾರ್ಯಕೈಗೊಂಡರು.
ಕೆರೆ ನೀರು ಕಾಲುವೆ ಮೂಲಕ ಹರಿಯದೆ, ಬೇರೆ ಸ್ಥಳದಿಂದ ಹರಿದು ವೈಜನಾಥ ದೇವಸ್ಥಾನ, ಇತರೆ ಸ್ಥಳಕ್ಕೆ ಅಪಾರ ನೀರು ನುಗ್ಗಿದ ವರದಿಯನ್ನು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಮಾಯವಾದ ರಾಯನಕೆರೆ ಕಾಲುವೆಗಳು’ ಎಂಬ ಶೀರ್ಷಿಕೆಯಲ್ಲಿ ಆಗಸ್ಟ್ 24ರಂದು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಆಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು, ತಡೆಗೋಡೆ ದುರಸ್ತಿ ಕಾರ್ಯಕೈಗೊಂಡಿದ್ದಾರೆ. ಸದ್ಯ ಪ್ರತಿ ಚೀಲದಲ್ಲಿ 25 ಕೆಜಿ ಮಣ್ಣು ತುಂಬಿದ 2 ಸಾವಿರಕ್ಕೂ ಹೆಚ್ಚು ಚೀಲಗಳನ್ನು ಹಾಕಿದ್ದು, ಸತತ ಎರಡು ದಿನ ಪ.ಪಂ ವಾಹನಗಳು, ಕಾರ್ಮಿಕರು ಸೇರಿದಂತೆ ಕೆಲಸದಲ್ಲಿ ತೊಡಗಿದ್ದು, ನೀರು ಹರಿವಿನ ಪ್ರಮಾಣ ಕಡಿಮೆಯಾಗಿದೆ.
ಆದರೆ ಕೆರೆ ಕೆಳಭಾಗದ ಅಯ್ಯಪ್ಪಸ್ವಾಮಿ ದೇವಸ್ಥಾನ ಹಿಂದೆ ಬೃಹತ್ ಬಂಡೆಕಲ್ಲು ಹಾಕಿ ಮುಚ್ಚಿರುವ ಮತ್ತು ನೆಲಸಮ ಮಾಡಿರುವ ಕಾಲುವೆಯನ್ನು ಮರುನಿರ್ಮಿಸಿ, ನೀರು ಸಮರ್ಪಕವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಕಿರಿಯ ಎಂಜಿನಿಯರ್ ಪ್ರವೀಣಕುಮಾರ ಮಾತನಾಡಿ, ‘ಸದ್ಯ ನೀರು ಪೋಲಾಗುವುದನ್ನು ತಡೆಯಲು ತುರ್ತು ದುರಸ್ತಿ ಕೈಗೊಳ್ಳಲಾಗಿದೆ. ಶಾಶ್ವತ ಪರಿಹಾರಕ್ಕೆ ಇಲಾಖೆ ಕ್ರಿಯಾಯೋಜನೆ ಮತ್ತು ಸರ್ಕಾರದ ಅನುದಾನದಲ್ಲಿ ಕಾಮಗಾರಿ ಕಾರ್ಯ ಮಾಡಬೇಕಿದೆ. ಕೆರೆ ನೀರು ಪೋಲಾದರೆ ಜನರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸದ್ಯ ಚೀಲಗಳಲ್ಲಿ ಮಣ್ಣು ತುಂಬಿ ತಡೆಗೋಡೆಗೆ ಹಾಕಲಾಗಿದೆ’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಕಂದಾಯ ಇಲಾಖೆ ಸಿಬ್ಬಂದಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ಪಾಲಕ ದೇವೆಂದ್ರಪ್ಪ, ಗುತ್ತಿಗೆದಾರ ಅಶೋಕ ಬಳ್ಳೊಳ್ಳಿ, ಪ.ಪಂ ಸಿಬ್ಬಂದಿ ಕಾರ್ಮಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.