ಯಲಬುರ್ಗಾ: ‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದರ ಜತೆ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ವರ್ಷದ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹಿಂದೆ ಇದ್ದ ಗುರುಕುಲ ಪದ್ಧತಿಯಲ್ಲಿ ಗುರುಗಳು ಶಿಷ್ಯರನ್ನು ತಮ್ಮೊಂದಿಗೆ ಇಟ್ಟುಕೊಂಡು ಅಭ್ಯಾಸ ಮಾಡಿಸುತ್ತಿದ್ದರು. ಆದರೆ ಈಗ ಅಂತಹ ಅಗತ್ಯವಿಲ್ಲ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶಿಕ್ಷಣದ ಮೂಲ ಆಶಯ ಈಡೇರುವ ರೀತಿಯಲ್ಲಿ ಪರಿಣಾಮಕಾರಿ ಬೋಧನೆಗೆ ಮುಂದಾಗುವುದು ಹಾಗೂ ಶಿಕ್ಷಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿಯೂ ಅವಶ್ಯಕವಾಗಿ ಮೂಡಬೇಕಾಗಿದೆ’ ಎಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಗೌಡ್ರ ಮಾತನಾಡಿ, ‘ತಾಲ್ಲೂಕಿನಲ್ಲಿ ಶಿಕ್ಷಣ ಕ್ಷೇತ್ರ ನಿರೀಕ್ಷೆಗೂ ಮೀರಿ ಪ್ರಗತಿಯಲ್ಲಿದೆ. ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಅಗತ್ಯ ಸೌಲಭ್ಯ ಮತ್ತು ಹೆಚ್ಚೆಚ್ಚು ಶಿಕ್ಷಣ ಸಂಸ್ಥೆಗಳು ಕ್ಷೇತ್ರದಲ್ಲಿ ತೆರೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಇಲ್ಲಿಯ ಮಕ್ಕಳು ಶೈಕ್ಷಣಿಕ ಸಾಧನೆಗೆ ಸಾಕಷ್ಟು ಅವಕಾಶಗಳಿವೆ’ ಎಂದರು.
ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ತಾಲ್ಲೂಕಿನ ವಿವಿಧ ಗ್ರಾಮದ ಶಿಕ್ಷಕರು ಪಾಲ್ಗೊಂಡಿದ್ದರು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಳ್ಳಿ, ಕೆಎಂಎಫ್ ನಿರ್ದೇಶಕ ಹಂಪಯ್ಯ ಹಿರೇಮಠ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮಾಸ್ತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ.ಧರಣಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ,ಜೆ,ದಾಣಿ, ಏಫ್.ಎಂ.ಕಳ್ಳಿ. ಎಸ್.ವಿ. ಬೆಣಕಲ್. ಸಂಗಮೇಶ ತೋಟದ, ಹುಸೇನ್‍ಸಾಬ ಭಾಗವಾನ್ ದೊಡ್ಡನಗೌಡ ಪಾಟೀಲ್, ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.