ಕುಷ್ಟಗಿ: ತಾಲ್ಲೂಕಿನ ಕಂದಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವುದನ್ನು ಎಂದೂ ಮರೆಯುವುದಿಲ್ಲ. ಅವರ ದೈನಂದಿನ ಬದುಕು ಆರಂಭಗೊಳ್ಳುವುದೇ ಇಲ್ಲಿಂದ.
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಡಾ.ರಾಧಾಕೃಷ್ಣನ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಕೆಯಾದರೆ, ಶಿಕ್ಷಕ ಹಿರೇಮಠ ಅವರು ಮಾತ್ರ ತಮ್ಮ ವೃತ್ತಿ ಬದುಕಿನ 31 ವಸಂತಗಳುದ್ದಕ್ಕೂ ಒಂದು ದಿನವೂ ತಪ್ಪದೇ ಮನೆ ಮತ್ತು ಶಾಲೆಯಲ್ಲಿ ಡಾ.ರಾಧಾಕೃಷ್ಣನ್ ಅವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಹಿರೇಮಠ ಅವರ ಈ ಕೈಂಕರ್ಯಕ್ಕೆ ಶಿಕ್ಷಣ ಇಲಾಖೆ ಮೆಚ್ಚುಗೆಯೂ ದೊರೆತಿದೆ.
ಈ ಕುರಿತು ಶಿಕ್ಷಕ ಕುಮಾರಸ್ವಾಮಿ, ‘ರಾಧಾಕೃಷ್ಣನ್ ಅವರು ನಿತ್ಯಸ್ಮರಣೀಯರು, ಅವರನ್ನು ಸ್ಮರಿಸದೆ ಶಾಲೆಗೆ ಹೋಗಬೇಡ ಎಂದೇ ನಮ್ಮ ತಂದೆ ಹೇಳಿದ್ದರು. ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದೇನೆ. ಇದರಿಂದ ಕರ್ತವ್ಯನಿಷ್ಠೆ ಹೆಚ್ಚಿ ಮಕ್ಕಳಲ್ಲಿ ಅಕ್ಷರಬೀಜ ಬಿತ್ತುವುದಕ್ಕೆ ಸಾಧ್ಯವಾಗಿದೆ’ ಎಂದು ಹೇಳುತ್ತಾರೆ.
ಶಿಕ್ಷಕ ಹಿರೇಮಠ ಮಕ್ಕಳಲ್ಲಿ ವೈಚಾರಿಕ, ಸಾಹಿತ್ಯಿಕ ವಿಚಾರಗಳ ಜೊತೆಗೆ ನೈತಿಕ ಶಿಕ್ಷಣ ನೀಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.