ಕುಷ್ಟಗಿ: ‘ಪುರಸಭೆಗೆ ಸೇರಿದ ಸಂತೆ ಮೈದಾನದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಸೂಚನೆಯಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಆದರೆ ಅಕ್ರಮವನ್ನು ಮುಚ್ಚಿಹಾಕುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ ಸ್ಪಷ್ಟಪಡಿಸಿದರು.
‘ಈ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತಿದ್ದಿ ಅಕ್ರಮ ಮರೆಮಾಚುವ ಸಂಬಂಧ ಜಾಲತಾಣಗಳಲ್ಲಿ ಹರಿದಾಡಿರುವ ಆಡಿಯೊದಲ್ಲಿರುವ ಧ್ವನಿ ತಮ್ಮದಲ್ಲ, ಅದು ಹಿಂದೆ ಇಲ್ಲಿ ಮುಖ್ಯಾಧಿಕಾರಿಯಾಗಿದ್ದ ಉಮೇಶ ಹಿರೇಮಠ ಮತ್ತು ಈಗ ಗದಗಕ್ಕೆ ವರ್ಗವಾಗಿರುವ ಕಂದಾಯ ನಿರೀಕ್ಷಕ ರಾಘವೇಂದ್ರ ಎಂಬುವವರ ಧ್ವನಿಗಳಾಗಿದೆ’ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಅಭಿವೃದ್ಧಿಕೋಶದ ಯೋಜನಾ ನಿರ್ದೇಶಕರ ಸೂಚನೆಯಂತೆ ವ್ಯಾಪಾರಿಗಳ ಬಳಿ ಇರುವ ಪುರಸಭೆ ಕಚೇರಿ ಆದೇಶ ಅಸಲಿ ಹೌದೊ ಅಲ್ಲವೊ ಎಂಬುದನ್ನು ಪರಿಶೀಲಿಸಿ ತ್ವರಿತವಾಗಿ ವರದಿ ನೀಡುವುದಾಗಿ ಹೇಳಿದರು.
ಈ ಮಧ್ಯೆ ಬಹಿರಂಗಗೊಂಡಿರುವ ಆಡಿಯೊ ಪ್ರಕಾರ ಹಿಂದಿನ ಮುಖ್ಯಾಧಿಕಾರಿ (ಸದ್ಯ ಹೂವಿನಹಡಗಲಿಯಲ್ಲಿ ಸಮುದಾಯ ಸಂಘಟನಾಧಿಕಾರಿ) ಉಮೇಶ ಹಿರೇಮಠ ಅವರದು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ದಾಖಲೆಗಳನ್ನು ತಿದ್ದಿ ಅಕ್ರಮವನ್ನು ಸರಿಪಡಿಸಿಕೊಳ್ಳುವಂತೆ ಕಂದಾಯ ನಿರೀಕ್ಷಕ ರಾಘವೇಂದ್ರ ಅವರಿಗೆ ಸೂಚಿಸಿರುವ ಉಮೇಶ ಹಿರೇಮಠ ಮತ್ತು ಅದಕ್ಕೆ ‘ಎಲ್ಲವನ್ನೂ ಸರಿಪಡಿಸುತ್ತೇನೆ’ ಎಂದೇ ಮತ್ತೊಂದು ಅಕ್ರಮ ಎಸಗಲು ಸಮ್ಮತಿಸಿರುವ ರಾಘವೇಂದ್ರ ಇವರು ಮಾಜಿ ಅಧ್ಯಕ್ಷನೊಂದಿಗೆ ಸೇರಿ ಹಗರಣ ಮುಚ್ಚಿಹಾಕಲು ಮುಂದಾಗಿರುವುದು ಸ್ಪಷ್ಟ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಕಂದಾಯ ನಿರೀಕ್ಷಕ ರಾಘವೇಂದ್ರ ಮತ್ತು ಬೇರೆ ಶಾಖೆಗಳ ಸಿಬ್ಬಂದಿ ಬಳಿ ಇರುವ ಸಂಬಂಧಿಸಿದ ದಾಖಲೆಗಳನ್ನು ಮುಖ್ಯಾಧಿಕಾರಿ ತಕ್ಷಣ ವಶಕ್ಕೆ ಪಡೆಯಬೇಕು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪುರಸಭೆಯ ಇತರೆ ಸಿಬ್ಬಂದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.