ADVERTISEMENT

ಬೆಳ್ಳಿ ಮಹೋತ್ಸವ ಆಚರಣೆಗೆ ಕೊನೆಗೂ ಒಪ್ಪಿದ ಜಿಲ್ಲಾಡಳಿತ

ಅಂಜನಾದ್ರಿ ಅಭಿವೃದ್ಧಿಗೆ ಭೂ ಸ್ವಾಧೀನಕ್ಕೆ ರೈತರೊಂದಿಗೆ ಚರ್ಚೆ: ಸಚಿವ ಸಿಂಗ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 13:04 IST
Last Updated 17 ಸೆಪ್ಟೆಂಬರ್ 2022, 13:04 IST

ಕೊಪ್ಪಳ: ‘ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದಲೇ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಜಿಲ್ಲಾಡಳಿತವೇ ಬೆಳ್ಳಿ ಮಹೋತ್ಸವ ಆಚರಿಸಬೇಕು ಎಂದು ಹಿಂದೆ ಹಲವು ಬಾರಿ ಅಭಿಪ್ರಾಯಗಳು ವ್ಯಕ್ತವಾಗಿದ್ದರೂ ಜಿಲ್ಲಾಡಳಿತ ಇದಕ್ಕೆ ಒಪ್ಪಿರಲಿಲ್ಲ. ಮಳೆಯಿಂದಾಗಿ ಅನೇಕ ಕಡೆ ಹಾನಿಯಾಗಿದೆ. ಈ ವೇಳೆ ಆಚರಣೆ ಮಾಡಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣವನ್ನು ಜಿಲ್ಲಾಡಳಿತ ಮುಂದಿಟ್ಟಿತ್ತು.

ಆದರೆ, ಉಡುಪಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆ ರಚನೆಗಾಗಿ ಹೋರಾಡಿದವರನ್ನು ಸ್ಮರಿಸಲು ಕಾರ್ಯಕ್ರಮ ವೇದಿಕೆಯಾಗಬೇಕಿತ್ತು ಎಂದು ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ಹೋರಾಟಗಾರರು ಆಗ್ರಹಿಸಿದ್ದರು.

ADVERTISEMENT

ಶನಿವಾರ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸಚಿವರ ಮುಂದೆ ಮಾಧ್ಯಮದವರು ಮತ್ತೆ ಪ್ರಶ್ನಿಸಿದಾಗ ‘ಜಿಲ್ಲಾಡಳಿತದ ವತಿಯಿಂದಲೇ ವಿಜೃಂಭಣೆಯಿಂದ ಬೆಳ್ಳಿ ಮಹೋತ್ಸವ ಆಚರಿಸಲಾಗುವುದು. ಆದಷ್ಟು ಬೇಗನೆ ದಿನಾಂಕ ಗೊತ್ತುಪಡಿಸಲಾಗುವುದು’ ಎಂದು ಘೋಷಿಸಿದರು.

ವಿಶ್ವಾಸಕ್ಕೆ ಪಡೆಯುತ್ತೇವೆ: ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಭೂಮಿ ಕೊಡಲು ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆದು ಎರಡು ತಿಂಗಳಲ್ಲಿ ಅಭಿವೃದ್ಧಿ ಕೆಲಸ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.

ಅರಣ್ಯ ಪ್ರದೇಶದಲ್ಲಿ ಹಂಪಿ ಬೋಲ್ಡರ್ಸ್‌ ಮತ್ತು ಹಂಪಿ ವೀಸ್ಕರ್‌ ಗೆಸ್ಟ್‌ಹೌಸ್‌ ಅಕ್ರಮವಾಗಿ ರೆಸಾರ್ಟ್‌ ನಡೆಸುತ್ತಿರುವ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಈ ರೆಸಾರ್ಟ್‌ 25 ವರ್ಷಗಳಿಂದ ಇದೆ. ಅಲ್ಲಿ ಅಕ್ರಮವಾಗಿ ಸಫಾರಿ ನಡೆಸುತ್ತಿದ್ದರೆ ಅದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುವರು. ಒಂದು ವೇಳೆ ಅಕ್ರಮವಾಗಿದ್ದರೆ ಅದನ್ನು ಸಕ್ರಮ ಮಾಡಲಾಗುವುದು. ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವವರಿಗೆ ನೆರವಾಗದಿದ್ದರೆ ಎಲ್ಲಿಯೂ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ’ ಎಂದರು.

ಹಿರೇಹಳ್ಳ ಜಲಾಶಯದಿಂದ ಬರುವ ನೀರಿನಿಂದ ಭೂಮಿಯೇ ಕೊಚ್ಚಿಕೊಂಡು ಹೋಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವ ರೈತರ ಬೇಡಿಕೆ ಬಗ್ಗೆ ಪ್ರಶ್ನಿಸಿದಾಗ ’ಈ ಕುರಿತು ಅಧಿಕಾರಿಗಳು ಪರಿಶೀಲಿಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.