ಕುಕನೂರು: ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರಿಗೆ ಬಿಸಿಲಿನ ಬಿಸಿ ಹೊಸದೇನಲ್ಲ. ಆದರೆ ಮಾರ್ಚ್ ಆರಂಭವಾದರೆ ಸಾಕು ಆ ಬಿಸಿ ಸಾಕಷ್ಟು ಹೆಚ್ಚಾಗಿ ಜನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯಕ್ಕೂ ಮೇಲಿಂದ ಮೇಲೆ ಸಮಸ್ಯೆಯಾಗುತ್ತಲೇ ಇರುತ್ತದೆ.
ಈ ಬಾರಿ ಬಿಸಿಲಿನ ಬೇಗೆ ಅವಧಿಗಿಂತ ಮೊದಲೇ ಜೋರಾಗಿದೆ. ಇದಕ್ಕೆ ಜಿಲ್ಲೆಯ ಜನ ಬಸವಳಿದಿದ್ದಾರೆ. ಮಾರ್ಚ್‌ನಲ್ಲಿಯೇ 37ರಿಂದ 38 ಡಿಗ್ರಿ ಸೆಲ್ಸಿಯಸ್ ತನಕ ಉಷ್ಣಾಂಶವಾದರೆ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇನ್ನೆಷ್ಟು ಬಿಸಿಲು ಇರಬಹುದು ಎನ್ನುವ ಆತಂಕ ಜನರನ್ನು ಕಾಡುತ್ತಿದೆ. ಏಪ್ರಿಲ್ ಮೊದಲ ಹಾಗೂ ಎರಡನೇ ವಾರದಲ್ಲಿ ಇರುತ್ತಿದ್ದ ತಾಪ ಈಗ ಮಾರ್ಚ್‌ನಲ್ಲಿ ಅನುಭವಿಸುವಂತಾಗಿದೆ.
ಎಪಿಎಂಸಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿತ್ಯ ನಗರ ಹಾಗೂ ಪಟ್ಟಣಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು, ದಿನಗೂಲಿ ವ್ಯಾಪಾರ ಮಾಡುವವರು, ಬೀದಿಬದಿ ವ್ಯಾಪಾರಿಗಳು ಹೀಗೆ ಪ್ರತಿಯೊಬ್ಬರಿಗೂ ಬಿಸಿಲಿನ ಬೇಗೆ ತಟ್ಟುತ್ತಿದೆ.
ಇದರಿಂದ ಪಾರಾಗಲು ಜನ ಛತ್ರಿ ಮೊರೆ ಹೋಗಿದ್ದಾರೆ. ಮರಗಳ ನೆರಳು, ಉದ್ಯಾನ, ಫ್ಯಾನ್, ಹವಾನಿಯಂತ್ರಿತ ಕೊಠಡಿ, ತಂಪು ಪಾನೀಯ ಬಳಕೆ ಮಾಡುತ್ತಿದ್ದರೂ ಮನಸ್ಸಿಗೆ ಹಾಗೂ ದೇಹಕ್ಕೆ ಮಾತ್ರ ಸಮಾಧಾನವಾಗುತ್ತಿಲ್ಲ. ಅರೆ ಝಳ ಮತ್ತಷ್ಟು ಹೈರಾಣವಾಗುವಂತೆ ಮಾಡಿದೆ. ಬಿಸಿಲಿನ ಪರಿಣಾಮದಿಂದಾಗಿ ಕುಕನೂರು, ಕೊಪ್ಪಳ ಸೇರಿದಂತೆ ಅನೇಕ ಕಡೆ ಮಧ್ಯಾಹ್ನದ ಸಮಯದಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ. ಬಿಸಿಲು ಏರುವ ಹೊತ್ತಿಗೆ ದೈನಂದಿನ ಕೆಲಸಗಳನ್ನು ಮುಗಿಸಿ ತಂಪನೆಯ ಜಾಗಕ್ಕಾಗಿ ಹುಡುಕಾಡುವಂತಾಗಿದೆ. ಬಿಸಿಲಿನ ಆಘಾತದಿಂದ ಆಗುವ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಸನ್‌ಸ್ಟ್ರೋಕ್ ವಾರ್ಡ್ ನಿರ್ಮಿಸಲಾಗಿದೆ.
ವಿದ್ಯುತ್ ಕಡಿತ: ವಿದ್ಯುತ್ ನಿರ್ವಹಣೆ ಕೆಲಸವೆಂದು ಬೇಸಿಗೆ ಸಮಯದಲ್ಲಿ ಮೇಲಿಂದ ಮೇಲೆ ವಿದ್ಯುತ್ ಕಡಿತವಾಗುತ್ತಿದ್ದು, ಫ್ಯಾನ್ ಬಳಿಸಲು ಆಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹಗಲು ಹಾಗೂ ರಾತ್ರಿ ವೇಳೆ ಆಗುವ ವಿದ್ಯುತ್ ಕಡಿತದಿಂದಾಗಿ ಜನ ಬೇಸತ್ತು ಹೋಗಿದ್ದಾರೆ.
ಬಿಸಿಲೇ ಬಂಡವಾಳ: ಬಿಸಿಲಿನಿಂದ ಜನ ಪರದಾಡುವಂತಾಗಿದೆ. ತಂಪು ಪಾನೀಯ ಹಾಗೂ ಹಣ್ಣುಗಳನ್ನು ಮಾರಾಟ ಮಾಡುವವರಿಗೆ ಬಿಸಿಲೇ ಬಂಡವಾಳವಾಗಿದೆ. ಎಳನೀರಿನ ಬೆಲೆ ಏರಿಕೆಯಾಗಿದೆ. ಕಲ್ಲಂಗಡಿ, ದ್ರಾಕ್ಷಿ, ಕರಬೂಜ ಹಣ್ಣುಗಳ ಬೇಡಿಕೆ ಹೆಚ್ಚಿದೆ. ಜಿಲ್ಲಾ ಕೇಂದ್ರದಲ್ಲಿಯೂ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತರಹೇವಾರಿ ತಂಪು ಪಾನೀಯ ಮಾರಾಟ ಜೋರಾಗಿದೆ. ಎಳನೀರು, ಮಜ್ಜಿಗೆ, ಕಬ್ಬಿನ ಹಾಲಿಗೆ ಬೇಡಿಕೆ ಕಂಡುಬರುತ್ತಿದೆ. ತಂಪು ಪಾನೀಯ ಮಾರಾಟ ಮಾಡುವ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದೆ.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸನ್‌ಸ್ಟ್ರೋಕ್ ವಾರ್ಡ್ ಆರಂಭ ತಂಪು ಮಾರಾಟ ಮಾಡುವವರಿಗೆ ಬಿಸಿಲೇ ಬಂಡವಾಳ ಬಿರು ಬಿಸಿಲಿನ ನಡುವೆಯೂ ನಿತ್ಯ ಕಾರ್ಮಿಕರ ಕೆಲಸ
ಬಿಸಿಲಿನಿಂದ ಜೀವ ಹೈರಾಣಾಗಿದೆ. ಬೇಸಿಗೆ ಯಾಕಾದರೊ ಬರುತ್ತದೆ ಅನಿಸುತ್ತದೆ. ತಣ್ಣಗೆ ಮನೆಯೊಳಗೆ ಇರೋಣವೆಂದರೆ ಕೆಲವೇ ಹೊತ್ತಿನಲ್ಲಿ ಫ್ಯಾನ್ ಗಾಳಿಯೂ ಬಿಸಿಯಾಗುತ್ತದೆಮಲ್ಲಪ್ಪ ತಳವಾರ ಕುಕನೂರು ನಿವಾಸಿ
ಬೆಳಿಗ್ಗೆ ಬೇಗನೆ ಎದ್ದು ನರೇಗಾ ಕೆಲಸಕ್ಕೆ ಹೋದ ಕೆಲವೇ ಹೊತ್ತಿನಲ್ಲಿ ಚುರ್ ಎನ್ನುವಷ್ಟು ಬಿಸಿಲಿನ ಶಾಖ ಬಡಿಯುತ್ತದೆ. ಆರೋಗ್ಯ ಹದಗೆಟ್ಟರೆ ಹೇಗೆ ಎನ್ನುವ ಆತಂಕ ಶುರುವಾಗಿದೆವಿಶಾಲಾಕ್ಷಿ ಲಕಮಾಪುರ ನರೇಗಾ ಕೂಲಿ ಕಾರ್ಮಿಕರು ಕುಕನೂರು
ಕೂಲಿ ಹಾಗೂ ಕಟ್ಟಡ ಕಾರ್ಮಿಕರಿಗೆ ಬಿಸಿಲಿನ ತಾಪದಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿತ್ಯ ಆರೋಗ್ಯದ ಮೇಲೂ ಸಮಸ್ಯೆಯಾಗುತ್ತಿದೆ. ಆದರೂ ದುಡಿಯುವುದು ಅನಿವಾರ್ಯಯಲ್ಲಪ್ಪ ಕಲ್ಮನಿ ಕುಕನೂರು ನಿವಾಸಿ
ಎಳನೀರಿಗೆ ಬಂಪರ್ ಬೇಡಿಕೆ ನಾರಾಯಣರಾವ ಕುಲಕರ್ಣಿ ಕುಷ್ಟಗಿ: ಈಗಿನದ್ದಕ್ಕಿಂತಲೂ ಬಿರು ಬೇಸಿಗೆ ಇನ್ನೂ ಮುಂದಿದೆ. ಈಗಲೇ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಆದರೆ ಬೇಡಿಕೆಗೆ ತಕ್ಕಂತೆ ಕಾಯಿಗಳು ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಕೃತಕ ತಂಪು ಪಾನೀಯಗಳಿಗಿಂತ ಎಳನೀರಿನ ಮೊರೆ ಹೋಗುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಪಟ್ಟಣದ ಎಳನೀರಿನ ವ್ಯಾಪಾರಿ ಶಾಮೀದಸಾಬ್ ಕಪಾಲಿ. ಪಟ್ಟಣ ಸೇರಿದಂತೆ ಈ ಭಾಗಕ್ಕೆ ಅನೇಕ ವರ್ಷಗಳಿಂದ ಮಂಡ್ಯ ಜಿಲ್ಲೆಯ ಮದ್ದೂರಿನ ಎಳನೀರು ತೆಂಗಿನಕಾಯಿ ಮಾರುಕಟ್ಟೆಯಿಂದಲೇ ಪೂರೈಕೆಯಾಗುತ್ತಿತ್ತು. ಉತ್ತಮ ಗುಣಮಟ್ಟದ ಕಾರಣಕ್ಕೆ ಅಲ್ಲಿಯ ಎಳನೀರಿನ ಕಾಯಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಈಗ ಮದ್ದೂರಿನ ಎಳನೀರು ಮುಂಬೈ ದೆಹಲಿ ಸೇರಿ ದೇಶದ ಪ್ರಮುಖ ಸ್ಥಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿದೆ. ಮಹಾನಗರಗಳ ವ್ಯಾಪಾರಿಗಳು ನೇರವಾಗಿ ಮಂಡ್ಯ ಜಿಲ್ಲೆಯ ರೈತರ ತೆಂಗಿನ ತೋಟಗಳಿಗೆ ಹೋಗಿ ಹೆಚ್ಚಿನ ದರವಾದರೂ ಸರಿ ಅಲ್ಲಿಂದಲೇ ಲಾರಿ ಭರ್ತಿ ಮಾಡಿಕೊಂಡು ಹೋಗುತ್ತಿದ್ದಾರೆ. ‘ಮದ್ದೂರಿನಲ್ಲಿಯೇ ಒಂದು ಎಳನೀರಿಗೆ ₹50-60 ಇದೆ. ಇಲ್ಲಿ ನಮಗೆ ಕನಿಷ್ಟ ₹10 ಆದರೂ ಉಳಿಯಬೇಕು. ದುಬಾರಿ ಬೆಲೆಗೆ ಗ್ರಾಹಕರನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಕಡಿಮೆ ಬೆಲೆಗೆ ಭದ್ರಾವತಿ ಶಿವಮೊಗ್ಗ ಭಾಗದಿಂದ ಎಳನೀರು ತರುತ್ತಿದ್ದೇವೆ. ಅಲ್ಲಿಯೂ ಕೂಡ ಫಸಲು ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಕಾಯಿಗಳು ಸಿಗುತ್ತಿಲ್ಲ. ಇನ್ನೊಂದು ತಿಂಗಳಾದರೆ ಎಳನೀರಿನ ಅಭಾವ ಎದುರಾಗಬಹುದು’ ಎನ್ನುತ್ತಾರೆ ಇಲ್ಲಿಯ ವ್ಯಾಪಾರಿ ಶರಣಪ್ಪ.
ಆರೋಗ್ಯ ಇಲಾಖೆ ಸಲಹೆ
* ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ/ಎಳನೀರು ಹಣ್ಣುಗಳ ರಸ ಹೆಚ್ಚಾಗಿ ಸೇವಿಸಬೇಕು. * ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಬೇಕು. * ಮನೆಯಿಂದ ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ ಛತ್ರಿ ಟವಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳಲು ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. * ಮಧ್ಯಾಹ್ನ 12ರಿಂದ 3 ಗಂಟೆ ಅವಧಿಯಲ್ಲಿ ಅನವಶ್ಯಕವಾಗಿ ಓಡಾಡಬೇಡಿ. * ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. * ಚಹಾ/ಕಾಫಿ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೊನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಿ.
ನೆರಳಿನ ಪರದೆ ಹಾಕಲು ಜೆಡಿಎಸ್ ಮನವಿ ಕೊಪ್ಪಳ: ನಗರದಲ್ಲಿ ಬಿರುಬಿಸಿಲು ಇದ್ದು ಶಾಖ ಹೆಚ್ಚಾಗಿ ರಸ್ತೆ ಮೇಲೆ ಸಂಚರಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಚಾರ ಸಿಗ್ನಲ್ ಇರುವ ವೃತ್ತದ ನಾಲ್ಕೂ ಕಡೆ ವಾಹನಗಳ ಸವಾರರಿಗೆ ನೆರಳಿನ ಪರದೆ ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದ್ದು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ‘ಮುಖ್ಯ ವೃತ್ತಗಳಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುವುದರಿಂದ ಬೆಳಿಗ್ಗೆಯಿಂದ ಸಂಜೆ ತನಕ ಸಂಚಾರ ದಟ್ಟಣೆ ಇರುತ್ತದೆ. ಬಿಸಿಲಿನ ಧಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಆದ್ದರಿಂದ ಪರದೆ ಹಾಕಬೇಕು. ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಸ್ ತಂಗುದಾಣಗಳಲ್ಲಿಯೂ ಈ ವ್ಯವಸ್ಥೆ ಮಾಡಬೇಕು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಮಂಜುನಾಥ ಸೊರಟೂರು ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಎಸ್‌ಟಿ ವಿಭಾಗದ ಅಧ್ಯಕ್ಷ ಮಲ್ಲಪ್ಪ ವಾಲ್ಮೀಕಿ ಮುಖಂಡರಾದ ಸಂಜೀವಗೌಡ ಪೊಲೀಸ್ ಪಾಟೀಲ ಮಂಜುನಾಥ ಮಾಲಿಪಾಟೀಲ ಸಿದ್ದನಗೌಡ ಮಾಲಿಪಾಟೀಲ ಹಾಗೂ ಸಿರಾಜ್ ಕೋಲ್ಕಾರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.