ADVERTISEMENT

‘ರಾಮಾಯಣದಲ್ಲಿ ಸುಸಂಸ್ಕೃತ ಸಮಾಜದ ಆಶಯ’

ವಾಲ್ಮೀಕಿ ಜಯಂತಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:29 IST
Last Updated 18 ಅಕ್ಟೋಬರ್ 2024, 7:29 IST
ಕುಷ್ಟಗಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ನಡೆದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಇತರರು ಚಾಲನೆ ನೀಡಿದರು
ಕುಷ್ಟಗಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ನಡೆದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಇತರರು ಚಾಲನೆ ನೀಡಿದರು   

ಕುಷ್ಟಗಿ: ರಾಮಾಯಣದಂಥ ಮಹಾನ್‌ ಗ್ರಂಥ ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ತತ್ವಾದರ್ಶಗಳು ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದ ಸಂದೇಶ ನೀಡಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಸರ್ಕಾರ ಹಾಗೂ ತಾಲ್ಲೂಕು ವಾಲ್ಮೀಕಿ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಬಿತ್ತುವ ಕೆಲಸ ನಡೆಸುವ ಮೂಲಕ ಸಮಾಜವನ್ನು ಗಟ್ಟಿಗೊಳಿಸುವ ಪ್ರಯತ್ನ ಮುಂದುವರೆಯಬೇಕು. ಸಮಾಜದಲ್ಲಿ ಎಲ್ಲ ಸಮುದಾಯಗಳೂ ಸಹೋದರ ಸಮುದಾಯಗಳೊಂದಿಗೆ ಅನೋನ್ಯ ಸಂಬಂಧ ಬೆಳೆಸಿಕೊಳ್ಳಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಪದವಿ ಕಾಲೇಜಿನ ಪ್ರಾಚಾರ್ಯ ಎಸ್‌.ವಿ.ಡಾಣಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ವಿಶ್ವದೆಲ್ಲೆಡೆ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಕ್ಷರ ಸಂಸ್ಕೃತಿ, ಜಾತಿ, ವರ್ಗ ರಹಿತ ಸಮಾಜದ ಆಶಯವನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಾಲತಿ ನಾಯಕ, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾನಪ್ಪ ತಳವಾರ ಇತರರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಹಶೀಲ್ದಾರ್ ಅಶೋಕ ಶಿಗ್ಗಾವಿ, ಬಿಇಒ ಸುರೇಂದ್ರ ಕಾಂಬಳೆ, ಪುರಸಭೆ ಸದಸ್ಯರಾದ ಮೈನುದ್ದೀನ್‌ ಮುಲ್ಲಾ, ವಸಂತ ಮೇಲಿನಮನಿ ಸೇರಿ ಅನೇಕ ಪ್ರಮುಖರು, ವಾಲ್ಮೀಕಿ ನಾಯಕ ಸಮುದಾಯದ ಹಿರಿಯರು, ಪದಾಧಿಕಾರಿಗಳು ಇದ್ದರು.

ಅದ್ದೂರಿ ಮೆರವಣಿಗೆ: ಅದಕ್ಕೂ ಪೂರ್ವದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಚಾಲನೆ ನೀಡಿದರು. ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಲೇಜಿಂ ತಂಡದಲ್ಲಿದ್ದ ವಿದ್ಯಾರ್ಥಿಗಳು, ಇತರೆ ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದವು. ತುಂತುರು ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಯಿತು.

ಸತೀಶ ಜಾರಕಿಹೊಳಿ ಸಿ.ಎಂ ಆಗಲಿ: ದೊಡ್ಡನಗೌಡ

ಅತಿ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗಳೂ ಈ ರಾಜ್ಯವನ್ನು ಆಳಬೇಕಿದೆ. ಅದರಲ್ಲೂ ರಾಜಕೀಯ ಪ್ರಬುದ್ಧತೆ ಹೊಂದಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ ಅವರು ಮುಖ್ಯಮಂತ್ರಿಯಾಗಗಬೇಕು ಎಂಬ ಆಸೆ ತಮ್ಮದಾಗಿದ್ದು ಅಂಥ ಯೋಗ್ಯ ವ್ಯಕ್ತಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಬಹುಜನರ ಆಶಯ ಬೇಗ ಈಡೇರಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅದಕ್ಕೂ ಮೊದಲು ಮಾತನಾಡಿ ಸತೀಶ ಜಾರಕಿಹೊಳಿ ಅವರ ಸಮಾಜಸೇವೆ ಪ್ರಸ್ತಾಪಿಸಿದ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ವಾಲ್ಮೀಕಿ ನಾಯಕ ಸಮುದಾಯದ ಪ್ರಭಾವಿ ವ್ಯಕ್ತಿ ಅಷ್ಟೇ ಅಲ್ಲ ಶಕ್ತಿಯೂ ಆಗಿದ್ದಾರೆ. ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರರಾಗಿರುವ ಸತೀಶ್ ಜಾರಕಿಹೊಳಿ ಶೈಕ್ಷಣಿಕ ಉದ್ಯೋಗ ತರಬೇತಿ ಕೇಂದ್ರಗಳನ್ನು ಸ್ವತಃ ತೆರೆಯುವ ಮೂಲಕ ರಾಜಕೀಯೇತರವಾಗಿಯೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.