ADVERTISEMENT

ಕಾರಟಗಿ | ‘ಪೌರಕಾರ್ಮಿಕರ ಸೇವೆ ಸ್ಮರಣೀಯ’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:29 IST
Last Updated 29 ಸೆಪ್ಟೆಂಬರ್ 2025, 5:29 IST
ಕಾರಟಗಿಯಲ್ಲಿ ಭಾನುವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು
ಕಾರಟಗಿಯಲ್ಲಿ ಭಾನುವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು   

ಕಾರಟಗಿ: ‘ಸುಂದರ ಪಟ್ಟಣ, ಜನರ ಆರೋಗ್ಯ ರಕ್ಷಿಸುವಲ್ಲಿ ಪೌರಕಾರ್ಮಿಕರ ಸೇವೆ ಸ್ಮರಣೀಯ. ಅವರ ಕಾಯಕವನ್ನು ಅದರೊಂದಿಗೆ ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಪದ್ಮಶ್ರೀ ಕನ್ವೆನ್ಷನ್ ಹಾಲ್‍ನಲ್ಲಿ ಭಾನುವಾರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ತಾಲ್ಲೂಕು ಘಟಕದ ಸಹಯೋಗದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪೌರಕಾರ್ಮಿಕರ ದಿನಾಚರಣೆ ಆಯೋಜಿಸುವ ಮೂಲಕ ಪೌರಕಾರ್ಮಿಕರ ಸೇವೆ, ಸಮಾಜಕ್ಕೆ ಅವರ ಕೊಡುಗೆ ಗುರುತಿಸುವ ಕೆಲಸಕ್ಕೆ ನಮ್ಮ ಸರ್ಕಾರ ನಾಂದಿ ಹಾಡಿತ್ತು. ಭರವಸೆ ನೀಡಿದಂತೆ ಗಂಗಾವತಿ ಪೌರಕಾರ್ಮಿಕರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೆಳೆದು 2 ಬಾರಿ ಅವರ ಸೇವೆಯನ್ನು ಕಾಯಂ ಮಾಡಿ, ಸೇವಾ ಭದ್ರತೆ ನೀಡಲಾಗಿತ್ತು’ ಎಂದು ಸ್ಮರಿಸಿದರು.

ADVERTISEMENT

ಪೌರಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ, ದೇವಿಗುಡ್ಡದ ಬಳಿ ಬಡಾವಣೆ ನಿರ್ಮಿಸಿ, ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡಲಾಗುವುದು ಎಂದವರು ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಸ್ವಚ್ಛತೆ ಕಾಪಾಡಿ ಸಮಾಜದ ಆರೋಗ್ಯ ರಕ್ಷಿಸುವ ಪೌರಕಾರ್ಮಿಕರ ತ್ಯಾಗ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸಣ್ಣ ವೀರಪ್ಪ ಚೌಡಕಿ ಮಾತನಾಡಿದರು.
ನಿವೃತ್ತ ಮುಖ್ಯಗುರು ಗುರುಬಸಪ್ಪ ಪಟ್ಟಣಶೆಟ್ಟಿ ವಿಶೇಷ ಉಪನ್ಯಾಸಕ ನೀಡಿದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರನ್ನು ಸಚಿವರು, ಇತರ ಗಣ್ಯರು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.

ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ ಅರಳಿ, ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್‌ ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸೋಮಶೇಖರ್ ಬೇರ್ಗಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಅಮರೇಶ ಮೈಲಾಪುರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.