ADVERTISEMENT

ಯಲಬುರ್ಗಾ: ಶಿಥಿಲ ಕೊಠಡಿ, ಮರದ ನೆರಳಲ್ಲಿಯೇ ಪಾಠ!

ಶಿರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಉಮಾಶಂಕರ ಬ.ಹಿರೇಮಠ
Published 8 ಡಿಸೆಂಬರ್ 2021, 19:30 IST
Last Updated 8 ಡಿಸೆಂಬರ್ 2021, 19:30 IST
ಯಲಬುರ್ಗಾ ತಾಲ್ಲೂಕು ಶಿರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಹಾಳಾಗಿರುವುದು
ಯಲಬುರ್ಗಾ ತಾಲ್ಲೂಕು ಶಿರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಹಾಳಾಗಿರುವುದು   

ಯಲಬುರ್ಗಾ: ತಾಲ್ಲೂಕಿನ ಶಿರಗುಂಪಿ ಗ್ರಾಮ ಅಭಿವೃದ್ಧಿ ವಂಚಿತ ಗಡಿಗ್ರಾಮ. ತಾಲ್ಲೂಕು ಕೇಂದ್ರದಿಂದ 20ಕ್ಕೂ ಅಧಿಕ ಕಿ.ಮೀ. ಅಂತರದಲ್ಲಿರುವ ನಿರೀಕ್ಷೆಗೂ ಮೀರಿ ಹಿಂದುಳಿದೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡದೇ ನಿರ್ಲಕ್ಷಿಸಿದ್ದರಿಂದ ಇಲ್ಲಿಯ ಶಿಕ್ಷಣದ ಸ್ಥಿತಿ ಶೋಚನೀಯವಾಗಿದೆ.

ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 8ನೇ ತರಗತಿವರೆ ಅಭ್ಯಾಸಕ್ಕೆ ಅವಕಾಶವಿದ್ದು, ಅಗತ್ಯ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಕೊಠಡಿ, ಶೌಚಾಲಯ, ಶಿಕ್ಷಕರು ಹಾಗೂ ಇನ್ನಿತರ ಅಗತ್ಯತೆಗಳು ಇಲ್ಲಿ ಗಗನ ಕುಸುಮ.

ಒಟ್ಟು 245 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೊಠಡಿಗಳ ಕೊರತೆಯೇ ಬಹುದೊಡ್ಡ ಸಮಸ್ಯೆ ನಿತ್ಯವು ಆವರಣದಲ್ಲಿರುವ ಮರದ ನೆರಳಲ್ಲಿಯೇ 4 ಮತ್ತು 5ನೇ ತರಗತಿಗಳ ಪಾಠ ನಡೆಯುವುದು ಸಾಮಾನ್ಯವಾಗಿದೆ. ಅಲ್ಲದೇ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿಯೇ ಪಾಠ ಮಾಡಬೇಕಾಗಿದೆ.

ADVERTISEMENT

ಕಳೆದ ನಾಲ್ಕೈದು ವರ್ಷಗಳಿಂದಲೂ ಹೀಗೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಮಾತ್ರ ಭರವಸೆ ಕೊಟ್ಟು ಹೋಗುವುದನ್ನು ಬಿಟ್ಟರೇ ಬೇರೇನೂ ಕೆಲಸ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಜೂರಾದ 9 ಶಿಕ್ಷಕರಲ್ಲಿ 8 ಶಿಕ್ಷಕರಿದ್ದು ಇನ್ನೊಬ್ಬ ಶಿಕ್ಷಕರು ಬೇಕಾಗಿದೆ. ತಕ್ಕಮಟ್ಟಿಗೆ ನೀರಿನ ವ್ಯವಸ್ಥೆಯಿದ್ದರೂ ಸರಿಯಾದ ನಿರ್ವಹಣೆ ಇಲ್ಲದಾಗಿದೆ. ಕಳೆದ ಒಂದು ತಿಂಗಳ ಹಿಂದೆ ಶುದ್ಧ ನೀರಿನ ಘಟಕಕ್ಕಾಗಿ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದು ಅರೆ ಬರೆ ಕೆಲಸ ಮಾಡಿದ್ದಾರೆ.

ಲಭ್ಯವಿರುವ ಸಂಪನ್ಮೂಲಗಳನ್ನು ಕೂಡಾ ಸರಿಯಾಗಿ ಬಳಕೆಮಾಡಿ ಮಕ್ಕಳಿಗೆ ಉಪಯೋಗಿಸಲು ಇಲ್ಲಿ ಸಾಧ್ಯವಾಗಿಲ್ಲ. ಮಕ್ಕಳ ಪಾಠಕ್ಕೆ ಕೊಠಡಿಗಳಿಲ್ಲದ ಈ ಶಾಲೆಯ ಮಕ್ಕಳಿಗೆ ಆಟದ ಮೈದಾನದ ಪರಿಕಲ್ಪನೆ ಇಲ್ಲದಂತಾಗಿದೆ. ಶೌಚಾಲಯ ಇದ್ದೂ ಇಲ್ಲದಂತಿದ್ದು, ಅವುಗಳು ಮಕ್ಕಳಿಗೆ ಬಳಕೆಯ ಬದಲು ಶಿಕ್ಷಕರಿಗೆ ಮಾತ್ರ ಬಳಕೆಯಾಗುತ್ತಿವೆ.

ಶೌಚಾಲಯಗಳು ನೀರಿನ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಳಕೆಗೆ ಯಾವುದೇ ರೀತಿಯಲ್ಲಿ ಮಕ್ಕಳಿಗೆ ಒತ್ತಾಯವಿಲ್ಲದಿರುವುದು ಸಾಮಾನ್ಯವಾಗಿದೆ. ಅಲ್ಲದೇ ಸುಮಾರು 250ದಷ್ಟು ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ಶೌಚಾಲಯದ ವ್ಯವಸ್ಥೆ ಅಗತ್ಯವಿದೆ.

ಅಲ್ಲದೇ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಪಾಠ ಮಾಡಲು ಲಭ್ಯವಿಲ್ಲ. ಗುಣಾತ್ಮಕ ಹಾಗು ಪರಿಣಾಮಕಾರಿ ಶಿಕ್ಷಣ ನೀಡುವ ಉತ್ಸಾಹಿ ಶಿಕ್ಷಕರಿದ್ದರೂ ಇಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಮೂಲ ಉದ್ದೇಶ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೆಲ ಶಿಕ್ಷಕರ ಬೇಸರದ ಮಾತು.

ಎಲ್ಲ ತರಗತಿಗಳು ಕೊಠಡಿಯಲ್ಲಿ ನಡೆಸಬೇಕಾದರೆ ತುರ್ತಾಗಿ ಕನಿಷ್ಠ 6ಕೊಠಡಿಗಳು ನಿರ್ಮಾಣವಾಗಬೇಕಾಗಿದೆ. ಇನ್ನೊಂದು ಶೌಚಾಲಯ ಅವಶ್ಯಕತೆಯಿದ್ದು, ಹಾಗೆಯೇ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.