ADVERTISEMENT

ಅಳವಂಡಿ: ಭಾವೈಕ್ಯತೆಯ ಮುಸ್ತಾಫ ಖಾದ್ರಿ ಉರುಸ್ ಇಂದು

ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ, ಭಕ್ತಿಯ ಶ್ರದ್ಧಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 7:22 IST
Last Updated 13 ಮಾರ್ಚ್ 2025, 7:22 IST
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದ ಹಜರತ್ ಸೈಯದ್ ಷಾ ಮು‌ಸ್ತಾಫ್ ಖಾದ್ರಿ ಮಹಾತ್ಮರ ದುರ್ಗಾ
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದ ಹಜರತ್ ಸೈಯದ್ ಷಾ ಮು‌ಸ್ತಾಫ್ ಖಾದ್ರಿ ಮಹಾತ್ಮರ ದುರ್ಗಾ   

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾ ಕೇಂದ್ರವಾದ ಸಯ್ಯದ್ ಹಜರತ್ ಶಾ ಮುಸ್ತಫಾ ಖಾದ್ರಿ ಅವರ ದರ್ಗಾವು ಭಾವೈಕ್ಯತೆದ ಪ್ರತೀಕವಾಗಿ ಗಮನ ಸೆಳೆಯುತ್ತಿದೆ.

ಬೆಳಗಟ್ಟಿಯ ಸಯ್ಯದ್ ಹಜರತ್ ಶಾ ಮುಸ್ತಫಾ ಖಾದ್ರಿ ಹಾಗೂ ಹಜರತ್ ಸೈಯದ್ ಶಾ ಮುರ್ತುಜಾ ಖಾದ್ರಿ ಮಹಾತ್ಮರ ಉರುಸ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ದೊರೆತಿದ್ದು, ಗುರುವಾರ ಮಹಾತ್ಮರ ಉರುಸ್ ಹಾಗೂ ಶುಕ್ರವಾರ ಜಿಯಾರತ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಬುಧವಾರ ಗಂಧ ಕಾರ್ಯಕ್ರಮ ನೆರವೇರಿತು. ಮಹಾತ್ಮರ ಗಂಧವು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹಜರತ್ ಅಬ್ದುಲ್ ಶಾವಲಿ ಮಹಾತ್ಮರ ದರ್ಗಾದಿಂದ ಗದುಗಿನ ಯುಸೂಫ್ ಬ್ಯಾಂಡ್ ಕಂಪನಿ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುವಾರ ಬೆಳಗಿನ ಜಾವ ದರ್ಗಾಕ್ಕೆ ತಲುಪಿತು.

ADVERTISEMENT

ಬಳಿಕ ಪರಂಪರಾಗತ ಪೀಠಾಧಿಪತಿ ಸಯ್ಯದ್ ಶಾ ಮೆಹಬೂಬ್ ಖಾದ್ರಿ ಸಜ್ಜಾದೆ ನಶೀನ ಇವರ ಅಮೃತ ಹಸ್ತದಿಂದ ‌ಮಹಾತ್ಮರ ಗದ್ದುಗೆಗೆ ಗಂಧ ಧರಿಸಲಾಯಿತು. ಮಹಾತ್ಮರ ಝಂಡಾ ಮುಂಡರಗಿ ತಾಲ್ಲೂಕಿನ ಕೋರ್ಲಹಳ್ಳಿ ಗ್ರಾಮದಿಂದ ಬಂದಿದೆ.

ಗುರುವಾರ ಉರುಸ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದ್ದು, ಉರುಸ್‌ ಅಂಗವಾಗಿ ಮಹಾತ್ಮರ ಸಂಭಾಷಣೆ, ಸುಪ್ರಸಿದ್ಧ ಕವಾಲಿ ಹಾಡುಗಾರರಿಂದ ಕಾರ್ಯಕ್ರಮ, ಪ್ರಸಿದ್ಧ ಶಾಹಿರಗಳಿಂದ ರಿವಾಯತ ಪದಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಶುಕ್ರವಾರ ಜಿಯಾರತ್ ಕಾರ್ಯಕ್ರಮ ನಡೆಯಲಿದೆ.

ಉರುಸ್‌ಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿ‌ಸಿ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ್ ವ್ರತ ಆಚರಣೆ ಮಾಡುವವರಿಗೆ ಸಹರಿ ಹಾಗೂ ಇಫ್ತಾರ್ ವ್ಯವಸ್ಥೆಯನ್ನು ದರ್ಗಾದ ಸ್ವಯಂ ಪ್ರೇರಿತ ಭಕ್ತರು ಮಾಡಿದ್ದಾರೆ. ಮಾ.14ರಂದು ಬೆಳಗಟ್ಟಿ ಗ್ರಾಮದ ಯುವ ಕಲಾವಿದರಿಂದ ‘ದಿಲ್ಲಿ ಹೊಕ್ಕ ಪುಂಡ ಹುಲಿ’ ಅರ್ಥಾತ್ ಕೆರಳಿದ ಕರ್ಣಾರ್ಜುನ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಇರಲಿದೆ.

ಹಿಂದೂ–ಮುಸ್ಲಿಂಮರು ಭಾವೈಕ್ಯತೆಯಿಂದ ಉರುಸ್ ಆಚರಣೆ ಮಾಡುತ್ತ ಬಂದಿದ್ದು ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
–ಸಯ್ಯದ್ ಹಜರತ್ ಶಾ ಮುಸ್ತಫಾ ಖಾದ್ರಿ, ದರ್ಗಾದ ಗುರುಗಳು
ಯಾವುದೇ ಜಾತಿ ಮತ ಧರ್ಮ ಎನ್ನದೇ ಎಲ್ಲರೂ ಒಟ್ಟಾಗಿ ಸೇರಿ ಶ್ರದ್ಧಾ ಭಕ್ತಿಯವಾಗಿ ಉರುಸ್ ಆಚರಣೆ ಮಾಡುತ್ತೇವೆ.
–ಹೊನ್ನಪ್ಪ ಗೌಡ ಪಾಟೀಲ, ಗ್ರಾಮದ ಮುಖಂಡ
ಒಗ್ಗಟ್ಟಾಗಿ ಪ್ರತಿವರ್ಷವೂ ಕೂಡ ಉರುಸ್ ಕಾರ್ಯಕ್ರಮವನ್ನು ಆಚರಿಸುತ್ತೇವೆ. ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
–ಮೋದಿನಸಾಬ ಆಲೂರು, ಮುಖಂಡ ಬೆಳಗಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.