ADVERTISEMENT

ಮಲೇರಿಯಾ ವಿರೋಧಿ ಮಾಸಾಚರಣೆ: ಮಲೇರಿಯಾ ನಿಯಂತ್ರಣಕ್ಕೆ ನೆರವಾಗಿ

ಸುರಕ್ಷಾಧಿಕಾರಿ ಜಯಶ್ರೀ ಮನವಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 2:03 IST
Last Updated 21 ಜೂನ್ 2021, 2:03 IST
ಹನುಮಸಾಗರ ಸಮೀಪದ ಯರಿಗೋನಾಳ ಗ್ರಾಮದಲ್ಲಿ ಮಲೇರಿಯಾ ಜಾಗೃತಿ ಜಾಥಾ ನಡೆಸಲಾಯಿತು
ಹನುಮಸಾಗರ ಸಮೀಪದ ಯರಿಗೋನಾಳ ಗ್ರಾಮದಲ್ಲಿ ಮಲೇರಿಯಾ ಜಾಗೃತಿ ಜಾಥಾ ನಡೆಸಲಾಯಿತು   

ಯರಿಗೋನಾಳ (ಹನುಮಸಾಗರ): ‘ಮಲೇರಿಯಾ, ಸೊಳ್ಳೆಯಿಂದ ಮನುಷ್ಯನಿಗೆ ಹರಡುವ ರೋಗ. ಅನಾಫಿಲಿಸ್ ಸೊಳ್ಳೆ ಕಚ್ಚಿದಾಗ ಜ್ವರ ಬರುತ್ತದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ’ ಎಂದು ಆರೋಗ್ಯ ಸುರಕ್ಷಾಧಿಕಾರಿ ಜಯಶ್ರೀ ಪಾಟೀಲ ಹೇಳಿದರು.

ಹೂಲಗೇರಿ ಪ್ರಾಥಮಿಕ ಅರೋಗ್ಯ ಕೇಂದ್ರದ ವತಿಯಿಂದ ಸಮೀಪದ ಯರಿಗೋನಾಳ ಗ್ರಾಮದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಸಲ ಈ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋಡಿಯಾ ಮನುಷ್ಯನ ಯಕೃತ್‍ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುತ್ತದೆ. ಕೆಂಪು ರಕ್ತದ ಕಣಗಳನ್ನು ನಾಶಪಡಿಸುತ್ತದೆ. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ, ಜತೆಗೆ ಮೈಕೈ ನೋವು ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಪಡೆದರೆ ಸಾವು ಸಂಭವಿಸುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

ADVERTISEMENT

ಆರೋಗ್ಯ ನಿರೀಕ್ಷಣಾಧಿಕಾರಿ ಶರಣಯ್ಯ ಬೆಲ್ಲದ ಮಾತನಾಡಿ,‘ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಂಜೆ ಸೊಳ್ಳೆಗಳು ಹೆಚ್ಚುವುದರಿಂದ ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಮೊದಲೇ ನಾವು ಸೊಳ್ಳೆಗಳ ತಾಣವನ್ನು ನಾಶಮಾಡಿ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

2025 ಕ್ಕೆ ನಾವು ಮಲೇರಿಯಾ ಮುಕ್ತ ಭಾರತ ನಿರ್ಮಾಣ ಮಾಡೋಣ’ ಎಂದು ಹೇಳಿದರು.

ಆರೋಗ್ಯ ಕೇಂದ್ರದ ಅಮರೇಶ, ಆಶಾ ಕಾರ್ಯಕರ್ತೆ ಶಾಂತ ಜುಗೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.