ADVERTISEMENT

ಹೂ–ಕಾಯಿ ಭಾರ: ಬಾಗಿ ಬಳುಕುವ ತೊಗರಿ: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತರು

ನಾರಾಯಣರಾವ ಕುಲಕರ್ಣಿ
Published 29 ಅಕ್ಟೋಬರ್ 2025, 7:16 IST
Last Updated 29 ಅಕ್ಟೋಬರ್ 2025, 7:16 IST
ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಬಳಿಯ ರೈತ ಹನುಮಂತ ಅವರ ಹೊಲದಲ್ಲಿ ತೊಗರಿ ಸಮೃದ್ಧವಾಗಿ ಬೆಳೆದಿರುವುದು
ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಬಳಿಯ ರೈತ ಹನುಮಂತ ಅವರ ಹೊಲದಲ್ಲಿ ತೊಗರಿ ಸಮೃದ್ಧವಾಗಿ ಬೆಳೆದಿರುವುದು   

ಕುಷ್ಟಗಿ: ಸದ್ಯದ ಪರಿಸ್ಥಿತಿಯಲ್ಲಿ ಹೀಗೇ ಇದ್ದರೆ, ಕರುಣೆತೋರಿ ವರುಣ ಬಿಡುವು ಮಾಡಿಕೊಂಡರೆ ಈ ಬಾರಿ ಮಳೆಯಾಶ್ರಯದಲ್ಲಿ ಬೆಳೆದಿರುವ ತೊಗರಿ ಬಂಪರ್‌ ಇಳುವರಿ ನೀಡುವ ಲಕ್ಷಣಗಳಿದ್ದು, ರೈತರಲ್ಲಿ ಭರವಸೆ ಚಿಗುರೊಡೆದಿದೆ.

ಯಾವುದೇ ಊರಿನ ದಾರಿಯಲ್ಲಿ ಹೋದರೂ ಹೊಲಗಳಲ್ಲಿ ತೊಗರಿ ಸಮೃದ್ಧವಾಗಿ ಬೆಳೆದು ನಿಂತಿರುವುದು ಕಣ್ಮನ ಸೆಳೆಯುತ್ತದೆ. ಆಳೆತ್ತರದಲ್ಲಿ ಬೆಳೆದು ನಿಂತಿರುವ ತೊಗರಿ ಹೊಲಗಳು ಅರಿ‍ಷಿಣ ಹೊದ್ದಂತೆ ಗೋಚರಿಸಿದರೆ ಬಹುತೇಕ ಹೊಲಗಳಲ್ಲಿನ ತೊಗರಿ ಗಿಡಗಳು ಕಾಯಿಗಳ ಭಾರಕ್ಕೆ ಬಾಗಿ ನೆಲ ಚುಂಬಿಸುತ್ತಿರುವುದು ರೈತರ ಮನಕ್ಕೆ ಮುದ ನೀಡುತ್ತಿದೆ.

ಉತ್ತಮ ನಿರ್ವಹಣೆ: ಉತ್ತಮ ಮಳೆಯಿಂದ ಅಗತ್ಯ ತೇವಾಂಶ, ಸೂಕ್ತ ಸಂದರ್ಭದಲ್ಲಿ ರೈತರು ಸಸ್ಯ ಸಂರಕ್ಷಣೆ, ಕಾಯಿಕೊರಕ ಹುಳುಗಳ ನಿಯಂತ್ರಣಕ್ಕೆ ಗಮನಹರಿಸಿದ್ದರಿಂದ ತೊಗರಿ ಬೆಳೆ ಉತ್ತಮವಾಗಿದೆ. ಈ ಬಾರಿ ಉತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ತೊಗರಿ ಬೆಳೆ ರೈತರ ಕೈಹಿಡಿಯುವ ಲಕ್ಷಣಗಳಿವೆ ಎನ್ನುತ್ತಾರೆ 16 ಎಕರೆ ಮಠದ ಎರೆ ಜಮೀನಿನಲ್ಲಿ ತೊಗರಿ ಬೆಳೆದಿರುವ ಪಟ್ಟಣದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ.

ADVERTISEMENT

ಈ ವರ್ಷದ ಮುಂಗಾರು ಹಂಗಾಮಿನ ವಿಶೇಷವೆಂದರೆ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ ಹಾಗೂ ಪ್ರಮುಖ ಬೇಳೆಕಾಳು ಬೆಳೆಯಾಗಿರುವ ತೊಗರಿಯನ್ನು ಪ್ರಮುಖವಾಗಿ ಬೆಳೆಯಲಾಗಿದೆ. ಅತ್ಯುತ್ತಮವಾಗಿ ಬೆಳೆದ ಮೆಕ್ಕೆಜೋಳ ಕಟಾವು ಪೂರ್ಣಗೊಂಡಿದ್ದು, ಅತಿಯಾದ ಮಳೆಗೆ ಮೆಕ್ಕೆಜೋಳ ರೈತರಿಗೆ ಒಂದಷ್ಟು ಹಾನಿ ಉಂಟು ಮಾಡಿದ್ದರೆ ಬಹುತೇಕ ರೈತರು ನಿರೀಕ್ಷೆಗೂ ಮೀರಿ ಇಳುವರಿ ತೆಗೆದು ದಾಖಲೆ ನಿರ್ಮಿಸಿರುವುದು ಗೊತ್ತಾಗಿದೆ.

ಈ ಹಿಂದೆ ಎರಡನೇ ಪ್ರಮುಖ ಬೆಳೆಯಾಗಿದ್ದ ತೊಗರಿ ಇತ್ತೀಚಿನ ವರ್ಷಗಳಲ್ಲಿ ಮುಖ್ಯ ಬೆಳೆಯಾಗಿ ಪರಿವರ್ತನೆಗೊಂಡಿದ್ದು, ಬಹಳಷ್ಟು ರೈತರು ತೊಗರಿಯ ಮೊರೆಹೋಗಿದ್ದಾರೆ. ಕಾರಣ ಇಷ್ಟೆ, ಕಡಿಮೆ ಮಳೆಯಾದರೂ ತೊಗರಿ ಉತ್ತಮ ಇಳುವರಿ ಬಂದದ್ದು, ಮಾರುಕಟ್ಟೆಯಲ್ಲಿ ಉತ್ತಮ ದರವೂ ದೊರಕಿದ್ದು, ಕಳೆದ ವರ್ಷದಲ್ಲಿ ಕಂಡುಬಂದಿತ್ತು. ಕೆಲ ರೈತರು ತೊಗರಿಯಲ್ಲಿ ಅಂತರಬೆಳೆಯಾಗಿ ಹೆಸರು, ಮೆಕ್ಕೆಜೋಳವನ್ನೂ ಬೆಳೆದಿದ್ದಾರೆ. ಆದರೆ, ಅಲ್ಪಾವಧಿ ತಳಿ ಮುಂಗಾರು ಹೆಸರು ಮಾತ್ರ ಸಂಪೂರ್ಣ ಕೈಕೊಟ್ಟು ಮಾಡಿದ ಖರ್ಚು ಸಹ ರೈತರ ಕೈಗೆ ಬರಲಿಲ್ಲ. ಆದರೆ ಅದೇ ಜಮೀನುಗಳಲ್ಲಿರುವ ತೊಗರಿ ಉತ್ತಮವಾಗಿ ಬೆಳೆದು ನಿಂತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

ಮಳೆ ಕಾಟ: ತೊಗರಿ ಅತ್ಯುತ್ತಮವಾಗಿ ಬೆಳೆದಿದ್ದರೂ ಸದ್ಯ ನಿರಂತರ ಮಳೆಯದ್ದೇ ರೈತರಲ್ಲಿ ಚಿಂತೆಯಾಗಿದೆ. ಅಧಿಕ ತೇವಾಂಶಕ್ಕೆ ಹೊಂದಿಕೊಳ್ಳುವ ಬೆಳೆ ಇದಲ್ಲ ಸಿಡಿ (ಒಣಗುವಿಕೆ) ರೋಗಕ್ಕೆ ತುತ್ತಾಗುತ್ತದೆ. ಆದರೆ, ಇಲ್ಲಿಯವರೆಗೂ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದರೂ ತೊಗರಿ ಬೆಳೆ ಉತ್ತಮವಾಗಿದೆ ಎಂಬುದೇ ಸಮಾಧಾನದ ಸಂಗತಿ ಎನ್ನುತ್ತಾರೆ ಟೆಂಗುಂಟಿಯ ರೈತ ಕೆ.ಬಸವರಾಜ. ಈಗಲಾದರೂ ಮಳೆ ಕಡಿಮೆಯಾದರೆ ಒಳ್ಳೆಯದು ಎಂಬುದು ರೈತರ ಆಶಯ.

ತೊಗರಿ ಬೆಳೆ ಸದ್ಯ ಅತ್ಯುತ್ತಮವಾಗಿದೆ. ಕೀಟಬಾಧೆಯೂ ನಿಯಂತ್ರಣದಲ್ಲಿದೆ. ಆದರೆ ಅತಿಯಾದ ಮಳೆಯಿಂದ ತಾವರಗೇರಾ ಹಾಗೂ ಇತರೆ ಭಾಗದಲ್ಲಿ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ
ಅಂತರಬೆಳೆಯಾಗಿ ಹೆಸರು ಬೆಳೆದಿದ್ದೆ ಮುಖ್ಯ ಬೆಳೆಯಾಗಿರುವ ತೊಗರಿ ಉತ್ತಮವಾಗಿ ಬೆಳೆದಿದ್ದು ಈ ಬಾರಿ ಉತ್ತಮ ಇಳುವರಿ ಬರುವ ಆಶಾಭಾವನೆ ಇದೆ
ಹನುಮಂತ ಗದ್ದಿ ರೈತ
ತೊಗರಿಗೆ ಎರೆ ರೈತರ ಮೊರೆ
ಕೃಷಿ ಇಲಾಖೆ ಮೂಲಗಳ ಪ್ರಕಾರ ತೊಗರಿ ಬೆಳೆ ಕ್ಷೇತ್ರ ತಾಲ್ಲೂಕಿನಲ್ಲಿ ಸುಮಾರು 17800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ದ್ವಿದಳ ಧಾನ್ಯವಾಗಿ ಗುರುತಿಸಿಕೊಂಡಿದ್ದರೂ ಈಗ ವಾಣಿಜ್ಯ ಬೆಳೆಗಳ ಸಾಲಿನಲ್ಲಿ ನಿಂತಿದೆ. ಈ ಹಿಂದೆ ಎರೆ (ಕಪ್ಪು) ಜಮೀನಿನ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯುತ್ತಿದ್ದರೆ ಈಗ ಅದರ ಬದಲಿಗೆ ತೊಗರಿಗೆ ಮೊರೆ ಹೋಗುತ್ತಿರುವುದು ಮತ್ತೊಂದು ವಿಶೇಷ. ದೀರ್ಘಾವಧಿ ಬೆಳೆಯಾಗಿರುವುದರಿಂದ ಹಿಂಗಾರು ಅವಧಿಯಲ್ಲಿ ಬೆಳೆಯುತ್ತಿದ್ದ ಪ್ರಮುಖ ದ್ವಿದಳಧಾನ್ಯ ಕಡಲೆ ಬಿತ್ತನೆ ಕ್ಷೇತ್ರವೂ ಕಡಿಮೆಯಾಗಿದೆ ಎಂಬುದು ಕೃಷಿ ಇಲಾಖೆಯ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.