ADVERTISEMENT

‘ಗ್ರಂಥಾಲಯಕ್ಕೆ ಓದುಗರ ಆಕರ್ಷಿಸಿ’

ಗ್ರಂಥಾಲಯ ಮೇಲ್ವಿಚಾರಕರಿಗೆ ಮಕ್ಕಳ ಹಕ್ಕು ರಕ್ಷಣೆ, ವ್ಯಕ್ತಿತ್ವ ವಿಕಸನ ತರಬೇತಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:10 IST
Last Updated 6 ಮೇ 2022, 4:10 IST
ಕೊಪ್ಪಳದಲ್ಲಿ ಗುರುವಾರ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಚಾಲನೆ ನೀಡಿದರು. ಜಿಪಂ ಸಿಇಒ ಫೌಜೀಯಾ ತರುನ್ನುಮ್, ಹರೀಶ್ ಜೋಗಿ, ಯಮನೂರಪ್ಪ ಮುಂತಾದವರು ಇದ್ದರು
ಕೊಪ್ಪಳದಲ್ಲಿ ಗುರುವಾರ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಚಾಲನೆ ನೀಡಿದರು. ಜಿಪಂ ಸಿಇಒ ಫೌಜೀಯಾ ತರುನ್ನುಮ್, ಹರೀಶ್ ಜೋಗಿ, ಯಮನೂರಪ್ಪ ಮುಂತಾದವರು ಇದ್ದರು   

ಕೊಪ್ಪಳ: ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದ್ದು, ಗ್ರಂಥಾಲಯ ಮೇಲ್ವಿಚಾರಕರು ಲಭ್ಯ ಸಂಪನ್ಮೂಲ ಬಳಸಿಕೊಂಡು ಓದುಗರನ್ನು ಆಕರ್ಷಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯೂನಿಸೆಫ್-ಮಕ್ಕಳ ರಕ್ಷಣಾ ಯೋಜನೆ,ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್, ಆಶ್ರಯದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ, ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ಕರಿಯರ್ ಗೈಡೆನ್ಸ್ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಂದ ವೃದ್ಧರವರೆಗೂ ಗ್ರಂಥಾಲಯಕ್ಕೆ ಬಂದು ಓದುವಂತೆ ಪಂಚಾಯಿತಿ ಗ್ರಂಥಾಲಯಗಳು ಕಾರ್ಯನಿರ್ವಹಿಸಬೇಕು. ಪುಸ್ತಕಗಳು, ಮೂಲ ಸೌಕರ್ಯಗಳು, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮುಂತಾದ ಸೌಲಭ್ಯಗಳನ್ನು ನೀಡುವುದರೊಂದಿಗೆ ಗ್ರಂಥಾಲಯ ಮೇಲ್ವಿಚಾರಕರಿಗೆ ಅಗತ್ಯ ತರಬೇತಿ ಸಹ ನೀಡಲಾಗಿದೆ. ಇದೆಲ್ಲವನ್ನೂ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಗ್ರಂಥಾಲಯಕ್ಕೆ ಆಗಮಿಸುವಂತೆ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ADVERTISEMENT

ಅದರೊಂದಿಗೆ ಗ್ರಂಥಾಲಯಕ್ಕೆ ಬರುವ ಚಿಕ್ಕ ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಮಾಹಿತಿ ನೀಡಬೇಕು. ಗ್ರಂಥಾಲಯದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಪೋಸ್ಟರ್ ಅಳವಡಿಸಿ, ಗ್ರಾಮೀಣರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಹತ್ತನೇ ತರಗತಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಪೂರಕವಾಗುವ ವಿಷಯ, ಮಾಹಿತಿಯನ್ನು ಕೂಡ ಆನ್‌ಲೈನ್ ಮೂಲಕ ನೀಡಬಹುದು. ಇದರಿಂದ ಮೇಲ್ವಿಚಾರಕರು ಆದಾಯವನ್ನು ಕೂಡ ಪಡೆಯಬಹುದು. ಜೊತೆಗೆ ಸಮಯದ ನಿರ್ವಹಣೆ ಮತ್ತು ಸದ್ಭಳಕೆ ಮಾಡಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಫೌಜಿಯಾ ತರನ್ನುಮ್ ಮಾತನಾಡಿ, ಗ್ರಂಥಾಲಯ ಅಭಿವೃದ್ಧಿಗೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಅಗತ್ಯ ಅನುದಾನ ನೀಡಲಾಗಿದ್ದು, ಬಹುತೇಕ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿವೆ. ಆದಾಗ್ಯೂ ಗ್ರಾಮೀಣರ ಬೇಡಿಕೆಗೆ ತಕ್ಕಂತೆ ಸಂಪನ್ಮೂಲಗಳ ಸೀಮಿತ ಲಭ್ಯತೆ ಆಧಾರದಲ್ಲಿ ಗ್ರಂಥಾಲಯದಲ್ಲಿ ಸೌಲಭ್ಯಗಳನ್ನು ಅಳವಡಿಸುವುದು ಗ್ರಂಥಾಲಯ ಮೇಲ್ವಿಚಾರಕರ ಜವಾಬ್ದಾರಿಯಾಗಿದೆ ಎಂದರು.

ಐಎಲ್‌ಪಿಯ ಹರೀಶ್, ಯೂನಿಸೆಫ್‌ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ಹಾಗೂ ವ್ಯವಸ್ಥಾಪಕ ಹರೀಶ್ ಜೋಗಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ತಹಶೀಲ್ದಾರ್‌ವಿಠ್ಠಲ್ ಚೌಗಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಮುಖ್ಯ ಗ್ರಂಥಾಲ ಯಾಧಿಕಾರಿ ಯಮನೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.