ADVERTISEMENT

ಕೊಪ್ಪಳ: ಸಾರಿಗೆ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:13 IST
Last Updated 6 ಆಗಸ್ಟ್ 2025, 6:13 IST
ಕೊಪ್ಪಳದ ಡಿಪೊದಲ್ಲಿ ಮಂಗಳವಾರ ನಿಂತಿದ್ದ ಸರ್ಕಾರಿ ಬಸ್‌ಗಳು
ಕೊಪ್ಪಳದ ಡಿಪೊದಲ್ಲಿ ಮಂಗಳವಾರ ನಿಂತಿದ್ದ ಸರ್ಕಾರಿ ಬಸ್‌ಗಳು   

ಕೊಪ್ಪಳ: ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದರೂ ಜಿಲ್ಲಾಕೇಂದ್ರದಲ್ಲಿ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಬಳಿಕ ಬಸ್‌ಗಳು ಸಂಚರಿಸಿದವು.

ಬೆಳಿಗ್ಗೆ ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಪೂರ್ವಭಾವಿ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಅವರು ಖಾಸಗಿ ವಾಹನ ಚಾಲಕರಿಗೆ ಸಹಕಾರ ನೀಡುವಂತೆ ಹೇಳಿದ್ದರು. ಅದರಂತೆ ಒಂದಷ್ಟು ಖಾಸಗಿ ವಾಹನಗಳು ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋದವು.

‘ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ತೆರಳಬಹುದು ಎಂದುಕೊಂಡು ಕೊಪ್ಪಳದಿಂದ ಹೂವಿನಹಡಗಲಿಗೆ ಹೊರಟಿದ್ದೆ. ಈಗ ಇಲ್ಲಿ ಒಂದೂ ಬಸ್‌ ಇಲ್ಲ. ಏನು ಮಾಡುವುದು ತೋಚದಾಗಿದೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವಸ್ತಿ ಇರಲು ತೆರಳಿದ್ದ ಬಸ್‌ಗಳು ಕೇಂದ್ರಿಯ ಬಸ್‌ ನಿಲ್ದಾಣಕ್ಕೆ ವಾಪಸ್ ಆಗಿದ್ದು, ಅವುಗಳ ಚಾಲಕರು ಕೂಡ ಕರ್ತವ್ಯಕ್ಕೆ ಬೆಳಿಗ್ಗೆ ಹಾಜರಾಗಲಿಲ್ಲ. ಸೋಮವಾರ ರಾತ್ರಿ ಯಲಬುರ್ಗಾ ಡಿಪೊದ ಬಸ್‌ ಯಲಬುರ್ಗಾದಿಂದ ಬೆಂಗಳೂರಿಗೆ ತೆರಳುವಾಗ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಮುಷ್ಕರದ ದಿನ ಕಾರ್ಯನಿರ್ವಹಣೆ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಬಿ. ಜಾಧವ್ ‘ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ 302 ಟ್ರಿಪ್‌ಗಳಲ್ಲಿ ಬಸ್‌ಗಳು ಸಂಚರಿಸಬೇಕಿದ್ದವು. ಪೂರ್ಣ ಸಿಬ್ಬಂದಿ ಕೊರತೆ ನಡುವೆಯೂ 143 ಟ್ರಿಪ್‌ಗಳ ಸಂಚಾರ ನಡೆಸಿದವು. 242 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು’ ಎಂದರು.

ಕೊಪ್ಪಳದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪ್ರಯಾಣಿಕರಿಗೆ ನರವಾದವು
ಸಾರ್ವಜನಿಕರಿಗೆ ನೆರವಾದ ಖಾಸಗಿ ವಾಹನಗಳು | ಪ್ರಯಾಣಿಕರ ಸುರಕ್ಷತೆಗೆ ಬಸ್‌ನಲ್ಲಿ ಪೊಲೀಸರ ಪ್ರಯಾಣ | ಕುಕನೂರು ಸಮೀಪದಲ್ಲಿ ಬಸ್‌ಗೆ ಕಲ್ಲು ತೂರಿದ ಕಿಡಿಗೇಡಿಗಳು

ಪ್ರಜಾವಾಣಿ ವರದಿಗೆ ಸ್ಪಂದನೆ: ಪರೀಕ್ಷೆ ಮುಂದೂಡಿಕೆ

ಕೊಪ್ಪಳ: ಮುಷ್ಕರವಿದ್ದರೂ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್‌ ಪರೀಕ್ಷೆ ಮಂಗಳವಾರ ನಿಗದಿಯಾಗಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಈ ಕುರಿತು ವೆಬ್‌ನಲ್ಲಿ ಮಂಗಳವಾರ ವರದಿ ಪ್ರಕಟಿಸಿ ‘ಪ್ರಜಾವಾಣಿ’ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಪರೀಕ್ಷೆ ಮುಂದೂಡಿದ ಕುರಿತು ಕೊಪ್ಪಳ ವಿ.ವಿ. ಕುಲಪತಿ ಪ್ರೊ ಬಿ.ಕೆ. ರವಿ ಅವರು ಮಾಹಿತಿ ನೀಡಿದರು. ‘ವಿದ್ಯಾರ್ಥಿಗಳ ಸಲುವಾಗಿಯೇ ಪರೀಕ್ಷೆ ನಿಗದಿ ಮಾಡಲಾಗಿತ್ತು. ಬಸ್‌ಗಳ ಸೌಲಭ್ಯವಿಲ್ಲದ ಕಾರಣ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ವಿಷಯ ಪ್ರಜಾವಾಣಿ ವರದಿ ಮೂಲಕ ಗಮನಕ್ಕೆ ಬಂದಿದ್ದು ಪರೀಕ್ಷೆಯನ್ನು ಆ. 18ಕ್ಕೆ ಮುಂದೂಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.