ADVERTISEMENT

ಕಾಲುವೆ ನಿರ್ವಹಣೆ ಇನ್ನೂ ಸಮಸ್ಯೆ

ಕೆಳಭಾಗದ ರೈತರಿಗೆ ಮುಟ್ಟದ ಕಾಲುವೆ ನೀರು

ಶಿವಕುಮಾರ್ ಕೆ
Published 22 ಫೆಬ್ರುವರಿ 2021, 5:05 IST
Last Updated 22 ಫೆಬ್ರುವರಿ 2021, 5:05 IST
ಗಂಗಾವತಿ ಸಮೀಪದ ಎಡದಂಡೆ ನಾಲೆ ವ್ಯಾಪ್ತಿಯ 25ನೇ ವಿತರಣಾ ಕಾಲುವೆಯಲ್ಲಿ ನೀರು ಪೂರೈಸುವುದನ್ನು ನಿಲ್ಲಿಸಿ, ಆನ್ ಆ್ಯಂಡ್ ಆಫ್ ನೀರು ನಿರ್ವಹಣೆ ಪದ್ಧತಿ ಜಾರಿಗೊಳಿಸಲು ಮುಂದಾಗಿರುವ ತುಂಗಭದ್ರಾ ಜಲಾಶಯ ಮಂಡಳಿ ಕ್ರಮವನ್ನು ಖಂಡಿಸಿ ಈಚೆಗೆ ರೈತರು ಪ್ರತಿಭಟನೆ ನಡೆಸಿದರು (ಸಂಗ್ರಹ ಚಿತ್ರ)
ಗಂಗಾವತಿ ಸಮೀಪದ ಎಡದಂಡೆ ನಾಲೆ ವ್ಯಾಪ್ತಿಯ 25ನೇ ವಿತರಣಾ ಕಾಲುವೆಯಲ್ಲಿ ನೀರು ಪೂರೈಸುವುದನ್ನು ನಿಲ್ಲಿಸಿ, ಆನ್ ಆ್ಯಂಡ್ ಆಫ್ ನೀರು ನಿರ್ವಹಣೆ ಪದ್ಧತಿ ಜಾರಿಗೊಳಿಸಲು ಮುಂದಾಗಿರುವ ತುಂಗಭದ್ರಾ ಜಲಾಶಯ ಮಂಡಳಿ ಕ್ರಮವನ್ನು ಖಂಡಿಸಿ ಈಚೆಗೆ ರೈತರು ಪ್ರತಿಭಟನೆ ನಡೆಸಿದರು (ಸಂಗ್ರಹ ಚಿತ್ರ)   

ಗಂಗಾವತಿ: ತುಂಗಭದ್ರಾ ನದಿ ಎಡದಂಡೆ ಕಾಲುವೆಯಿಂದ ಒಂದೆಡೆ ಅನಧಿಕೃತವಾಗಿ ನೀರು ಕಳ್ಳತನ ಆಗುತ್ತಿದ್ದರೆ, ಮತ್ತೊಂದೆಡೆ ನೀರಾವರಿ ಇಲಾಖೆಯಿಂದ ನೀರಿನ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಇದರ ಪರಿಣಾಮ ಎರಡನೇ ಬೆಳೆ ನಿರೀಕ್ಷೆಯಲ್ಲಿರುವ ಕೆಳಭಾಗದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಬೇಸಿಗೆ ಬೆಳೆಗೆ ಕಾಲುವೆ ನೀರನ್ನೇ ನಂಬಿರುವ ರೈತರಿಗೆ ಈ ಬಾರಿ ಸರಿಯಾಗಿ ನೀರು ಸಿಗದೇ ಇರುವುದರಿಂದ ಮತ್ತೊಮ್ಮೆ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಪ್ರತಿಭಟಿಸುವಂತಾಗಿದೆ. ತಾಲ್ಲೂಕಿನ ದಾಸನಾಳ ಗ್ರಾಮದಿಂದ ಸಿಂಧನೂರು ಭಾಗದವರೆಗೂ ಮುಖ್ಯಕಾಲುವೆಯಿಂದ ಅನಧಿಕೃತವಾಗಿ ರೈತರು ನೀರು ಪಡೆಯುತ್ತಿರುವ ಕಾರಣ ಕೆಳಭಾಗದ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಈ ಬಗ್ಗೆ ಕೆಳಭಾಗದ ರೈತರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಸಮಸ್ಯೆಗಳು ಉಲ್ಭಣವಾದಾಗ ಮಾತ್ರ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಎನ್ನುವುದು ರೈತರ ಆರೋಪ.

‘ಆನ್ ಆ್ಯಂಡ್ ಆಫ್‌’ಗೆ ವಿರೋಧ: ಎಡದಂಡೆ ನಾಲೆ ವ್ಯಾಪ್ತಿಯ ವಿತರಣಾ ಕಾಲುವೆಯಲ್ಲಿ ನೀರು ಪೂರೈಸುವುದನ್ನು ನಿಲ್ಲಿಸಿ, ರಾಯಚೂರು ಪಟ್ಟಣಕ್ಕೆ ನೀರು ಪೂರೈಸುವ ನೆಪದಲ್ಲಿ ‘ಆನ್ ಆ್ಯಂಡ್ ಆಫ್’ ಮಾದರಿಯಲ್ಲಿ ನೀರು ನಿರ್ವಹಿಸಲು ನೀರಾವರಿ ನಿಗಮ ನಿರ್ಧರಿಸಿದೆ. ಆದರೆ, ಇದಕ್ಕೆ ತುಂಗಭದ್ರಾ 25 ಮತ್ತು 31ನೇ ಕಾಲುವೆ ವ್ಯಾಪ್ತಿಯ ಕೆಳಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ನೀರು ನಿರ್ವಹಣೆಯಲ್ಲಿ ಇಲಾಖೆ ವಿಫಲವಾಗಿರುವುದರಿಂದ ಕೆಳಭಾಗಕ್ಕೆ ಸಕಾಲಕ್ಕೆ ಸಮರ್ಪಕ ನೀರು ತಲುಪದೆ ರೈತರು ನಿರಂತರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಕಷ್ಟದ ಮಧ್ಯೆಯೂ ಭತ್ತ ನಾಟಿ, ಕ್ರಿಮಿನಾಶಕ ಹಾಗೂ ರಸಗೊಬ್ಬರಕ್ಕೆ ಈಗಾಗಲೇ ಸಾಕಷ್ಟು ಸಾಲ ಮಾಡಿದ್ದಾರೆ. ಇಲಾಖೆಯ ನಿರ್ಧಾರದಿಂದ ಬೆಳೆ ಹಾಳಾಗಿ, ಸಾಲದ ಶೂಲಕ್ಕೆ ಈಡಾಗಿ, ಆತ್ಮಹತ್ಯೆ ದಾರಿ ಹಿಡಿಯುವ ಅಪಾಯವಿದೆ ಎಂದು ಹತ್ತಾರು ಗ್ರಾಮಗಳ ರೈತರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ನೀರಾವರಿ ಅಧಿಕಾರಿ ನಿರ್ಲಕ್ಷ್ಯದಿಂದ ಮೇಲ್ಭಾಗದಲ್ಲಿ ಎಗ್ಗಿಲ್ಲದೆ ನೀರು ಕಳ್ಳತನ ನಡೆಯುತ್ತಿದೆ. ಆರು ತಿಂಗಳಿಗೊಮ್ಮೆ ಮಾತ್ರ ನಾಮಕಾವಸ್ತೆಗೆ ಅಧಿಕಾರಿಗಳು ಕಾಲುವೆಯ ಪರಿಶೀಲನೆ ನಡೆಸುತ್ತಾರೆ. ನೀರು ಬಿಟ್ಟಾಗ ಮಾತ್ರ ಕಾಲುವೆಗಳ ತೂತುಗಳನ್ನು ಮುಚ್ಚಲು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತದೆ ಎಂಬುದು ರೈತರ
ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.