
ಕೊಪ್ಪಳ: ‘ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಕಾಲಮಿತಿಯೊಳಗೆ ಮುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಭಾನುವಾರ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿ, ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪರಿಶೀಲಿಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿ, ಮಾತನಾಡಿದರು.
ತುಂಗಭದ್ರಾ ಅಣೆಕಟ್ಟೆಯ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದ್ದು ಗೇಟ್ ಸಂಖ್ಯೆ 18ರ ಕೆಲಸ ಪೂರ್ಣಗೊಂಡಿದೆ. ಕ್ರಸ್ಟ್ ಗೇಟ್‌ಗಳ ಎರೆಕ್ಷನ್ ಮತ್ತು ಡಿಸ್‌ಮೆಟಲಿಂಗ್ ಕಾರ್ಯಕ್ಕೆ ತಲಾ ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿವೆ. ಗೇಟ್ ಸಂಖ್ಯೆ 15ರ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಲ್ಲಿ ತಿಂಗಳಲ್ಲಿ 6 ಗೇಟ್ ಅಳವಡಿಸುವುದಾಗಿ ಕಂಪನಿಯವರು ಹೇಳಿದ್ದರು. ಈಗ ಒಂದು ತಿಂಗಳಲ್ಲಿ 8 ಗೇಟ್‌ಗಳನ್ನು ಅಳವಡಿಸುವುದಾಗಿ ಹೇಳುತ್ತಿದ್ದಾರೆ ಎಂದರು.
ಜೂನ್ ಒಳಗೆ ಎಲ್ಲ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ಟೈಮ್ ಬಾಂಡ್ ನೀಡಲಾಗಿದೆ. ಮೇ ಒಳಗೆ ಪೂರ್ಣಗೊಳಿಸುವುದಾಗಿ ಟೆಂಡರ್ ಪಡೆದ ಕಂಪನಿಯವರು ತಿಳಿಸಿದ್ದಾರೆ ಎಂದರು.
33 ಕ್ರಸ್ಟ್ ಗೇಟ್‌ಗಳ ಬದಲಾವಣೆಗೆ ಒಟ್ಟು₹54 ಕೋಟಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿದೆ. ಈಗಾಗಲೇ ಆಂಧ್ರಪ್ರದೇಶ ಸರ್ಕಾರ ₹20 ಕೋಟಿ ನೀಡಿದೆ. ನಮ್ಮ ರಾಜ್ಯದ ಪಾಲು ₹10 ಕೋಟಿಯನ್ನು ಟಿಬಿ ಬೋರ್ಡ್‌ಗೆ ಈಗಾಗಲೇ ನೀಡಲಾಗಿದೆ. ತೆಲಂಗಾಣ ರಾಜ್ಯದವರೂ ತಮ್ಮ ಪಾಲಿನ ಮೊತ್ತ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ 15 ಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದ್ದು ಅಳವಡಿಕೆ ಮಾತ್ರ ಬಾಕಿಯಿದೆ. 8 ಗೇಟ್‌ಗಳು ಫ್ಯಾಬ್ರಿಕೇಶನ್ ಹಂತದಲ್ಲಿದ್ದು ಹೊಸಪೇಟೆ ಮತ್ತು ಗದಗ ಜಿಲ್ಲೆಯಲ್ಲಿ ತಲಾ 4 ಗೇಟ್‌ಗಳ ಪೈಕಿ ತಲಾ ಎರಡು ಗೇಟ್‌ಗಳು ಇನ್ನೂ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ಜತೆ ಆಯಾ ಗೇಟ್‌ಗಳ ಡಿಸ್‌ಮೆಟಲಿಂಗ್ ಪೂರ್ಣಗೊಂಡಿದ್ದು ಇತರೆ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಟಿಬಿ ಬೋರ್ಡ್ ಅಧಿಕ್ಷಕ ಅಭಿಯಂತರ ನಾರಾಯಣ ನಾಯ್ಕ, ಸೆಕ್ಷನ್ ಅಧಿಕಾರಿ ಜಿ. ಕಿರಣ, ಪಂಪಾಪತಿ ಡಿ.ಕೆ ಇದ್ದರು
‘ಮೇ ತಿಂಗಳ 2 ವಾರದಲ್ಲಿ ಪೂರ್ಣ’ ಟಿಬಿ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ ರಡ್ಡಿ ಮಾತನಾಡಿ ‘ಡಿಸ್‌ಮೆಟಲಿಂಗ್ ಮತ್ತು ಎರೆಕ್ಷನ್ ಎರಡೂ ಕೆಲಸಗಳು ನಡೆಯುತ್ತಿವೆ. ಗೇಟ್ ಸಂಖ್ಯೆ 18 ಮತ್ತು 20ರ ಕೆಲಸ ಪೂರ್ಣಗೊಂಡಿದ್ದು 27ರ ಕೆಲಸವನ್ನು 3 ದಿನದಲ್ಲಿ ಕೈಗೊಳ್ಳಲಾಗುವುದು. ಗೇಟ್ ಸಂಖ್ಯೆ 4ರ ಕಾಮಗಾರಿಯನ್ನು ಪ್ರಾರಂಭಿಸಿ ನಾಲ್ಕು ಗೇಟ್‌ಗಳನ್ನು ಅಳವಡಿಸಲಾಗುವುದು. ಮೊದಲ ಗೇಟ್ ಅಳವಡಿಸಲು 8 ರಿಂದ 10 ದಿನ ಸಮಯ ತೆಗೆದುಕೊಂಡಿದೆ. ಎರಡನೇ ಗೇಟ್ ಅಳವಡಿಸಲು 6 ದಿನ ಸಮಯ ತೆಗೆದುಕೊಳ್ಳಲಿದೆ. ಒಟ್ಟು 40 ಜನ ಕೆಲಸ ಮಾಡುತ್ತಿದ್ದಾರೆ. ಮೇ ತಿಂಗಳ ಎರಡನೇ ವಾರದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.