ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಸೋಮವಾರ ಕಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರ–ಭರತ್ ಕಂದಕೂರ
ಕೊಪ್ಪಳ: ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಕಳೆದ ವರ್ಷದಷ್ಟು ಭರ್ತಿಯಾಗಿಲ್ಲವಾದರೂ ಈಗಿರುವ ನೀರು, ಹರಿಯುವ ವೇಗ ಮತ್ತು ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಪ್ರಕೃತಿಯ ರಮಣೀಯ ಸೌಂದರ್ಯ ಪ್ರವಾಸಿ ಪ್ರಿಯರನ್ನು ಕೈ ಬೀಸಿ ಕರೆಯುವಂತಿದೆ.
ಪೂರ್ವ ಮುಂಗಾರಿನಿಂದಲೇ ಶಿವಮೊಗ್ಗ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ಕಡಿಮೆ ಅವಧಿಯಲ್ಲಿ ಹೆಚ್ಚು ನೀರು ರಭಸವಾಗಿ ಹರಿದು ಬಂದಿತು. ಆದರೆ ಕಳೆದ ವರ್ಷ 19ನೇ ಕ್ರಸ್ಟ್‌ಗೇಟ್ ಕಳಚಿದ ಬಳಿಕ ನಡೆದ ತಾಂತ್ರಿಕ ಪರೀಕ್ಷೆಯಲ್ಲಿ ಜಲಾಶಯದ ಉಳಿದ ಗೇಟ್‌ಗಳ ಸಾಮರ್ಥ್ಯವೂ ಕಡಿಮೆಯಾಗಿದ್ದು ಗರಿಷ್ಠ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹ ಮಾಡಬೇಕೆಂದು ಜಲಾಶಯ ಸುರಕ್ಷತಾ ತಜ್ಞರು ಸಲಹೆ ನೀಡಿದ್ದಾರೆ.
ಈ ಕಾರಣದಿಂದಾಗಿಯೇ ಜಲಾಶಯಕ್ಕೆ ನೀರು ಬಂದಷ್ಟೇ ವೇಗವಾಗಿ ದಿನದಿಂದ ದಿನಕ್ಕೆ ಹೊರಹರಿವು ಹೆಚ್ಚಾಗುತ್ತಲೇ ಇದೆ. ಸೋಮವಾರ ಸಂಜೆ 1,19,613 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 72.129 ಟಿಎಂಸಿ ಅಡಿ ನೀರು ಇದೆ. ಒಳಹರಿವು ಹೆಚ್ಚಾಗುತ್ತಿದ್ದಂತೆಯೇ ಹೊರಹರಿವಿನ ಪ್ರಮಾಣವೂ ಏರುತ್ತಲೇ ಇದೆ.
ಇದರಿಂದಾಗಿ ತುಂಗಭದ್ರಾ ಜಲಾಶಯದ ಮುಂಭಾಗದಲ್ಲಿ ವಿಶಾಲವಾಗಿ ಹರಿದು ಹೋಗುತ್ತಿರುವ ಸುಂದರ ದೃಶ್ಯಗಳನ್ನು ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮುನಿರಾಬಾದ್ ಭಾಗದಲ್ಲಿರುವ ಜಲಾಶಯದ ಸಮೀಪ, ಹಳೆ ಸೇತುವೆ ಬಳಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ದೂರದಿಂದಲೇ ಜನ ಸೆಲ್ಫಿ ತೆಗೆದುಕೊಂಡು ನೀರಿನ ಸೌಂದರ್ಯ ಸೆರೆ ಹಿಡಿಯುತ್ತಿದ್ದಾರೆ. ಹೊಸಪೇಟೆ–ಕೊಪ್ಪಳ ನಡುವೆ ಓಡಾಡುವ ಜನ ಸೇತುವೆ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಸಾಮಾನ್ಯವಾಗಿದೆ.
ಒಂದೆಡೆ ಹೊಸಪೇಟೆ ಭಾಗದಲ್ಲಿರುವ ಗುಡ್ಡದಲ್ಲಿನ ಹಸಿರು ಪರಿಸರದ ನಡುವೆ ನೀರಿನ ರಮಣೀಯತೆ, ಗೇಟ್‌ಗಳಿಂದ ನೀರು ಹೊರಗಡೆ ಬಿಟ್ಟಾಗ ಬರುವ ಶಬ್ದ, ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ವೇಗ, ತಂಪನೆಯ ಗಾಳಿ ಕೂಡ ಗಮನ ಸೆಳೆಯುತ್ತಿದೆ. ಸಂಜೆ ಹಾಗೂ ವಾರಾಂತ್ಯದ ದಿನಗಳಲ್ಲಿ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಹೆಚ್ಚುತ್ತಲೇ ಇದೆ. ವೇಗವಾಗಿ ಹರಿಯುವ ನೀರು, ಶಬ್ದ, ವಿಶಾಲವಾಗಿ ಗರಿಬಿಚ್ಚುವ ನೀರಿನ ತನ್ಮಯತೆ ಎಲ್ಲರನ್ನೂ ಗಮನ ಸೆಳೆಯುತ್ತಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹೊರಬೀಳುವ ನಯನ ಮನೋಹರ ದೃಶ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.