ADVERTISEMENT

ಕಾಲುವೆಗೆ ನೀರು: ಕೊಪ್ಪಳ ಜಿಲ್ಲೆಯ 60 ಸಾವಿರ ಹೆಕ್ಟೇರ್‌ ಕೃಷಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 9:13 IST
Last Updated 3 ಆಗಸ್ಟ್ 2023, 9:13 IST
ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಸಮೀಪ ಭತ್ತದ ಸಸಿ ಮಡಿ ಮಾಡಿರುವ ದೃಶ್ಯ
ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಸಮೀಪ ಭತ್ತದ ಸಸಿ ಮಡಿ ಮಾಡಿರುವ ದೃಶ್ಯ   

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಬಿತ್ತನೆ ಮಾಡುವ 60 ಸಾವಿರ ಹೆಕ್ಟೇರ್‌ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದಲ್ಲಿ ವ್ಯಾಪಕವಾಗಿ ಭತ್ತ ಬೆಳೆಯಲಾಗುತ್ತಿದೆ. ಕಳೆದ ವರ್ಷದ ಮುಂಗಾರಿನ ಅವಧಿಯಲ್ಲಿ ಈ ವೇಳೆಗಾಗಲೇ ಭತ್ತ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಈ ಬಾರಿ ಮುಂಗಾರು ವಿಳಂಬವಾಗಿದ್ದರಿಂದ ನೀರು ಬಿಡುವ ಪ್ರಕ್ರಿಯೆಯೂ ತಡವಾಗಿದೆ.

ಜಿಲ್ಲೆಯಲ್ಲಿ ಒಟ್ಟು 3.08 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ ಭತ್ತ ಬಿತ್ತನೆ ಕ್ಷೇತ್ರವೇ 60 ಸಾವಿರ ಹೆಕ್ಟೇರ್‌ ಇದೆ. ಹಳ್ಳದ ದಂಡೆ ಹಾಗೂ ಬೋರ್‌ವೆಲ್‌ಗಳನ್ನು ಹೊಂದಿರುವ ರೈತರು ಈಗಾಗಲೇ ಭತ್ತ ನಾಟಿ ಮಾಡಿದ್ದಾರೆ. ಇನ್ನುಳಿದವರು ಕಾಲುವೆ ನೀರಿಗಾಗಿ ಎದುರು ನೋಡುತ್ತಿದ್ದಾರೆ.

ADVERTISEMENT

ಇದನ್ನೂ ಓದಿ: ತುಂಗಭದ್ರಾದಿಂದ 5,575 ಕ್ಯೂಸೆಕ್ಸ್ ನೀರು ಹರಿಸಲು ಅನುಮತಿ: ಡಿ.ಕೆ. ಶಿವಕುಮಾರ್

‘ಬೋರ್‌ವೆಲ್‌ ಹೊಂದಿರುವವರು ಎಂಟು ಸಾವಿರ ಹೆಕ್ಟೇರ್‌ನಲ್ಲಿ ಈಗಾಗಲೇ ಭತ್ತ ಬಿತ್ತನೆ ಮಾಡಿದ್ದಾರೆ. ಉಳಿದವರು ಸಸಿ ಮಡಿ ಮಾಡಿಕೊಂಡು ತಯಾರಿಯಲ್ಲಿದ್ದಾರೆ. ಈಗ ನೀರು ಬಿಟ್ಟಿರುವುದರಿಂದ ನಾಟಿ ಕೆಲಸ ಆರಂಭಿಸಲಿದ್ದಾರೆ. ಆ. 10ರ ಒಳಗಾಗಿ ಭತ್ತ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಪ್ರಜಾವಾಣಿಗೆ ತಿಳಿಸಿದರು.

ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ ಅಧಿಕಾರಿಗಳು

ನಡೆಯದ ಸಭೆ: ಪ್ರತಿ ವರ್ಷ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ನಡೆಸಿಯೇ ಬಲದಂಡೆ ಹಾಗೂ ಎಡದಂಡೆ ಭಾಗದ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ನಿರ್ಧಾರ ಮಾಡಲಾಗುತ್ತಿತ್ತು.

ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು ನೀರು ಬಿಡುವುದನ್ನು ತೀರ್ಮಾನಿಸುತ್ತಿದ್ದರು. ಈ ಬಾರಿ ನೀರು ಬಿಡುವುದು ವಿಳಂಬವಾಗಿರುವುದರಿಂದ ಐಸಿಸಿ ಸಭೆ ನಡೆಸದೇ ನೀರು ಬಿಡುಗಡೆ ಮಾಡಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ರಾಯಚೂರು ಜಿಲ್ಲೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.