ADVERTISEMENT

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು; ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 15:41 IST
Last Updated 3 ಆಗಸ್ಟ್ 2023, 15:41 IST
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿದು ಬಂದ ನೀರು
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿದು ಬಂದ ನೀರು   

ಕೊಪ್ಪಳ: ರೈತರ ಬೇಡಿಕೆ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ತುಂಗಭದ್ರಾ ಜಲಾಶಯದಿಂದ ಗುರುವಾರ ಕಾಲುವೆಗಳಿಗೆ ನೀರು ಹರಿಸಿದ್ದು ರೈತರಲ್ಲಿ ಸಂತಸ ಮೂಡಿಸಿದೆ.

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 83.18 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿದ್ದು, ಒಳ ಹರಿವು 21,492 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಲಭ್ಯತೆ ಆಧರಿಸಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ಸೂಚನೆಯ ಮೇರೆಗೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗಿದೆ ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್.ಬಸವರಾಜ್ ತಿಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಗುರುವಾರ (ಆ. 3ರಿಂದ) ಸರಾಸರಿ 3000 ಕ್ಯುಸೆಕ್‌ನಂತೆ (ಕುಡಿಯುವ ನೀರಿಗಾಗಿ ರಾಯಚೂರು ಜಿಲ್ಲೆಯ ಗಣೇಕಲ್ ಜಲಾಶಯ ತುಂಬುವ ತನಕ) ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಗುರುವಾರದಿಂದ ಸರಾಸರಿ 1200 ಕ್ಯುಸೆಕ್‌ನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದಕ್ಕನುಗುಣವಾಗಿ ನೀರು ಹರಿಸಲಾಗುತ್ತದೆ.

ADVERTISEMENT

ಬಲದಂಡೆ ಕೆಳಮಟ್ಟದ ಕಾಲುವೆಗೆ ಗುರುವಾರದಿಂದ ಸರಾಸರಿ 650 ಕ್ಯುಸೆಕ್‌ನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದರ ಪ್ರಕಾರ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ರಾಯ ಬಸವಣ್ಣ ಕಾಲುವೆಗೆ ಜೂನ್ 1ರಿಂದ ಸರಾಸರಿ 250 ಕ್ಯುಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ಇದರಲ್ಲಿ ಮೊದಲು ಯಾವುದು ಅದಕ್ಕೆ ಅನುಗುಣವಾಗಿ ನೀರು ಹರಿಯಲಿದೆ.

ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಗುರುವಾರದಿಂದ ಸರಾಸರಿ 25 ಕ್ಯುಸೆಕ್‌ನಂತೆ ಅಥವಾ ಲಭ್ಯತೆ ಇರುವವರೆಗೆ ಯಾವುದು ಮೊದಲೊ ಅದಕ್ಕೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈತರಿಗೆ ಸೂಚನೆ: ‘ರೈತರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿ ಪಡಿಸಿದ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಬೆಳೆ ಉಲ್ಲಂಘನೆ ಮಾಡುವುದು, ಕಾಲುವೆ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು ಮಾಡಬಾರದು’ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.